
• ಚಿ.ಗೋ ರಮೇಶ್
ಕನ್ನಡ ಚಿತ್ರರಂಗದಲ್ಲಿ ಕುಚುಕು ಗೆಳೆಯರಾದ ಅಂಬರೀಷ್ ಮತ್ತು ವಿಷ್ಣುವರ್ಧನ್ ಅವರಿಗೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದ “ದಿಗ್ಗಜರು” ಚಿತ್ರ ಚಿರಕಾಲ ನೆನಪಿನಲ್ಲಿ ಉಳಿಯುವಂತಹುದು. ಎರಡು ದಶಕಗಳ ಬಳಿಕ ಅದೇ ಮಾದರಿಯ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದು ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅದುವೇ “ಕರಟಕ ದಮನಕ”.
ಯಶಸ್ವಿ ಚಿತ್ರಗಳ ಸರದಾರ ಯೋಗರಾಜ್ ಭಟ್ ಆಕ್ಷನ್‍ಕಟ್ ಹೇಳಿದ್ದು ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್, ನಾಟ್ಯ ಸಾರ್ವಭೌಮ ಪ್ರಭುದೇವ ಕಾಣಿಸಿಕೊಂಡಿದ್ದು ದಿಗ್ಗಜರ ಸಮಾಗಮವಾಗಿದೆ.
ಅಪರೂಪಕ್ಕೆ ಎನ್ನುವಂತೆ ಚಿತ್ರೀಕರಣ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು, ಈ ವೇಳೆ ಮಾತಿಗಿಳಿದ ನಟ ಶಿವರಾಜ್‍ಕುಮಾರ್, ಪ್ರಭುದೇವ ಸಾರ್ ಜೊತೆ ನಟನೆ ಮಾಡಿದ್ದೇ ಗೊತ್ತಾಗಿಲ್ಲ, ಇಬ್ಬರ ಕಾಂಬಿನೇಷನ್‍ನಲ್ಲಿ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ, ಕಾಮಿಡಿ ಕಮರ್ಷಿಯಲ್, ಸ್ನೇಹ, ಸಹೋದರತ್ವವೂ ಚಿತ್ರದಲ್ಲಿದೆ. ಇನ್ನೂ ರಾಕ್‍ಲೈನ್ ವೆಂಕಟೇಶ್ ಅಂದ್ರೆ ನಮ್ಮದೇ ನಿರ್ಮಾಣವಿದ್ದಂತೆ ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ನಟ ಪ್ರಭುದೇವ ಮಾಹಿತಿ ನೀಡಿ, ಶಿವಣ್ಣ ನನ್ನ ಕಾಂಬಿನೇಷನ್ ಚಿತ್ರದಲ್ಲಿ ಸಮಾನವಾಗಿದೆ. ಚಿತ್ರದಲ್ಲಿ ಅವರಿಲ್ಲದೆ ನಾನಿಲ್ಲ, ನಾನಿಲ್ಲದೆ ಅವರಿಲ್ಲ. ಶಿವಣ್ಣನಿಗಾಗಿ ನೃತ್ಯ ನಿರ್ದೇಶನ ಮಾಡುತ್ತಿದ್ದೇನೆ. ಒಳ್ಳೆಯ ಚಿತ್ರವಾಗಲಿದೆ. ಅದರಲ್ಲಿಯೂ ಶಿವಣ್ಣ ಸಾರ್ ಜೊತೆ ನಟನೆ ಮಾಡಿದ್ದು ಮರೆಯಲಾರದ ಅನುಭವ ಎಂದರು.
ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ನೀಡಿ, ಸಿನಿಮಾ ಆರಂಭವಾಗಿ ಬರೋಬ್ಬರಿ ಒಂದು ವರ್ಷ ಆಯಿತು, ಟಾಕಿ ಭಾಗ ಪೂರ್ಣಗೊಂಡಿದೆ. ಚಿತ್ರದಲ್ಲಿ ಆರೇಳು ಹಾಡುಗಳಿದ್ದು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿವೆ. ವಿ.ಹರಿಕೃಷ್ಣ ಸಂಗೀತ ಕೆಲಸ ಇನ್ನೂ ಮುಂದುವರಿಸಿದ್ದಾರೆ. ಹಾಡು ಮೋಡಿ ಮಾಡಲಿವೆ. ಹಾಸ್ಯದ ಜೊತೆಗೆ ಎಮೋಷನ್ ಇರುವ ಚಿತ್ರ. ಹಾಡುಗಳ ಚಿತ್ರೀಕರಣ ಮುಗಿಯುವುದರೊಳಗೆ 100 ದಿನ ಚಿತ್ರೀಕರಣ ಮಾಡಿದಂತಾಗಬಹುದು,ಕನ್ನಡದಲ್ಲಿ ಹೊಸ ಮಾದರಿಯ ಚಿತ್ರವಾಗಲಿದೆ ಎಂದರು.
ನಾಯಕಿಯರಾಗಿ ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಮುಖ್ಯಮಂತ್ರಿ ಚಂದ್ರು, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಆನಂದ್ ಆಡಿಯೋ ಶ್ಯಾಮ್ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ಕುತಂತ್ರಿ ನರಿಗಳ ಹೆಸರು
“ಕರಟಕ ದಮನಕ” ಎರಡು ಕುತಂತ್ರಿ ನರಿಗಳ ಹೆಸರು, ಕರಕಟನಾಗಿ ಶಿವಣ್ಣ, ದಮನಕನಾಗಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಬೇರೆಯವರನ್ನು ನಂಬುವ ಪ್ರಶ್ನೆ ಇಲ್ಲ. ಕುತಂತ್ರಿಗಳು, ನಯವಂಚಕರು, ಸ್ಕಾಮ್ ಪಂಡಿತರು,ಇವರು ಹೀಗ್ಯಾಕೆ ಆದರು, ಬದುಕಿನಲ್ಲಿ ಏನಾಯಿತು ಎನ್ನುವ ಸುತ್ತ ಸಾಗುವ ಸಂಪೂರ್ಣ ಮನರಂಜನೆಯ ಚಿತ್ರ.
-ಯೋಗರಾಜ್ ಭಟ್, ನಿರ್ದೇಶಕ
ಕ್ರಾಂತಿ ಮಾಡುವುದು ಖಚಿತ
ಪ್ರಭುದೇವ ಅವರಿಗಾಗಿ ಸಿನಿಮಾ ಮಾಡುವ ಕನಸಿತ್ತು. ಅದು ನನಸಾಗಿದೆ. ಜೊತೆಗೆ ಶಿವಣ್ಣ ಕೂಡ ಚಿತ್ರದಲ್ಲಿರುವುದು ಅಭಿಮಾನಿಗಳಿಗೆ ಹಬ್ಬದೂಟ. ಇವರಿಬ್ಬರ ಕಾಂಬಿನೇಷನ್ ಚಿತ್ರ ಕ್ರಾಂತಿ ಮಾಡಲಿದೆ. ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದೆ.ಪ್ರೇಕ್ಷಕರು ಚಿತ್ರವನ್ನು ಇಷ್ಟಪಡ್ತಾರೆ ಎನ್ನುವ ವಿಶ್ವಾಸವಿದೆ. ಚಿತ್ರದಲ್ಲಿ ಯೋಗರಾಜ್ ಭಟ್ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಭಾಷೆ, ಗೆಟಪ್, ಅದ್ಬುತವಾಗಿ ಮೂಡಿಬಂದಿದೆ, ಅವರಿಗೆ ನ್ಯಾಷನಲ್ ಅವಾರ್ಡ್ ಸಿಗಬೇಕು. ಶಿವಣ್ಣ, ಪ್ರಭುದೇವ ಅವರನ್ನು ಇಂತಹ ಪಾತ್ರದಲ್ಲಿ ನೊಡಿಲ್ಲ. ಸ್ನೇಹ, ತಮಾಷೆ, ಟೋಟಲಿ ಪ್ರೇಕ್ಷಕರನ್ನು ಮನರಂಜಿಸುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ. – ರಾಕ್‍ಲೈನ್ ವೆಂಕಟೇಶ್, ನಿರ್ಮಾಪಕ