ಕರಗ ರದ್ದು

ಬೆಂಗಳೂರು, ಏ.೧೯- ಕೋವಿಡ್ ಎರಡನೇ ಅಲೆಯ ಭೀತಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಭಾವೈಕ್ಯತೆಯ ಪ್ರತೀಕ, ಐತಿಹಾಸಿಕವಾದ ’ಕರಗ ಶಕ್ತ್ಯೋತ್ಸವ’ ಹಾಗೂ ’ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ಈ ಬಾರಿ ರದ್ದುಗೊಳಿಸಲಾಗಿದೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ, ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿದೆ.
ಜತೆಗೆ, ಪ್ರಸ್ತುತ ಬೆಂಗಳೂರು ಮಹಾನಗರದಲ್ಲಿ ಕೋವಿಡ್-೧೯ ಪ್ರಕರಣವು ವ್ಯಾಪಕವಾಗಿ ಹರುಡುತ್ತಿದ್ದು, ಸರ್ಕಾರವು ರಾತ್ರಿ ಕರ್ಪ್ಯೂ ವಿಧಿಸಿರುತ್ತದೆ.
ಆದ್ದರಿಂದ ಬೆಂಗಳೂರು ನಗರದಲ್ಲಿ ಕೋವಿಡ್-೧೯ರ ಪ್ರಕರಣವು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿಲ ಮತ್ತು ಸರ್ಕಾರದ ಆದೇಶದನ್ವಯ ಧಾರ್ಮಿಕ ಆಚರಣೆಗಳನ್ನು ನಡೆಸಲು ನಿಷೇಧಿಸಿರುವುದರಿಂದ, ಶ್ರೀ ಧರ್ಮರಾಯಸ್ವಾಮಿ ದೇವಾಲದಯಲ್ಲಿ ೨೦೨೧ನೇ ಸಾಲಿನಲ್ಲಿ ನಡೆಸಲಿರುವ ದ್ರೌಪದಿ ಕರಗ ಶಕ್ತ್ಯೋತ್ಸವ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಿರುವುದಿಲ್ಲ. ಸಾರ್ವಜನಿಕರು, ಭಕ್ತಾಧಿಗಳು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.