ಬೆಂಗಳೂರು, ಮಾ.೨೯- ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಕರಗ ಉತ್ತವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಜಾತ್ರೆಗೆ ಇಂದು ರಾತ್ರಿ ೧೦ಕ್ಕೆ ರಥೋತ್ಸವ ಹಾಗೂ ಮುಂಜಾನೆ ೩ಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ಸಿಗಲಿದೆ.
ಇಂದಿನಿಂದ ಏ.೬ರಂದು ಬೆಂಗಳೂರು ಕರಗ ಶಕ್ತ್ಯುತ್ಸವ ನಡೆಯಲಿದೆ. ದೇವಸ್ಥಾನದ ಆವರಣದಲ್ಲಿ ನಿತ್ಯ ವಿವಿಧ ಪೂಜಾ ಕೈಂಕರ್ಯಗಳು ಒಂಭತ್ತು ದಿನಗಳ ಕಾಲ ನಡೆಯಲಿವೆ. ಜತೆಗೆ ೯ ಬಾಗಿಲು ಪೂಜೆ ಆಗಲಿದೆ.
ಕಬ್ಬನ್ ಉದ್ಯಾನದ ಕರಗದ ಕುಂಟೆ, ಸಂಪಂಗಿರಾಮ ನಗರದಲ್ಲಿನ ಸಂಪಂಗಿ ಕೆರೆ, ಲಾಲ್ಬಾಗ್ ರಸ್ತೆಯ ೩ನೇ ಕ್ರಾಸ್ನಲ್ಲಿನ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ, ಗವಿಪುರ ಗುಟ್ಟಹಳ್ಳಿಯ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ, ಕೆಂಪೇಗೌಡ ವೃತ್ತದ ಶ್ರೀ ಅಣ್ಣಮ್ಮ ದೇವಸ್ಥಾನ, ಕಲಾಸಿಪಾಳ್ಯದ ಮರಿಸ್ವಾಮಿ ಮಠಗಳಲ್ಲೂ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ಜರುಗಲಿವೆ.
ಕರಗ ಉತ್ಸವದ ಪ್ರಮುಖ ಆಚರಣೆ ಮತ್ತು ಆಕರ್ಷಣೆಯಾದ ಕರಗ ಶಕ್ತ್ಯುತ್ಸವ ಏ.೬ರಂದು ಮಧ್ಯರಾತ್ರಿ ೧೨.೩೦ರಿಂದ ಜರುಗಲಿದೆ. ದೌಪ್ರದಮ್ಮನ ಕರಗ ತೆರಳುವ ಮಾರ್ಗದುದ್ದಕ್ಕೂ ಗೋವಿಂದ ನಾಮ ಸ್ಮರಣೆ ಇರಲಿದೆ.
ಹೂವಿನ ಕರಗವು ಮಲ್ಲಿಗೆಯ ಘಮವನ್ನು ಪಸರಿಸಲಿದೆ. ಜತೆಗೆ ದೌಪ್ರದಿ ಪುತ್ರರಾದ ವೀರ ಕುಮಾರರು ದಾರಿಯುದ್ದಕ್ಕೂ ಕಾವಲು ಕಾಯಲಿದ್ದಾರೆ. ಇದೇ ವೇಳೆ ವೀರ ಕುಮಾರರು ಕೈಯಲ್ಲಿನ ಕತ್ತಿಯನ್ನು ಎದೆಗೆ ಬಡಿದುಕೊಳ್ಳುತ್ತಾ ಅಲಗು ಸೇವೆಯನ್ನು ಸಲ್ಲಿಸಲಿದ್ದಾರೆ.
ಈ ಬಾರಿಯೂ ಜ್ಞಾನೇಂದ್ರ ಅವರೇ ಕರಗ ಹೊರಲಿದ್ದು, ಅವರದ್ದು ಈ ಸಲ ಹನ್ನೆರಡನೇ ಕರಗವಾಗಿದೆ. ಅದ್ಧೂರಿಯಾಗಿ ನಡೆಯಲಿರುವ ಈ ಕರಗಕ್ಕೆ ಶಿಷ್ಟಾಚಾರ ಪ್ರಕಾರ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಶ್ರೀಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರೂ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ ಗರುಡಾಚಾರ್,ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಈ ಬಾರಿ ಕರಗ ಬಹಳ ವಿಜೃಂಭಣೆಯಿಂದ ನಡೆಯಲಿದ್ದು, ಕರಗ ಈ ಬಾರಿಯೂ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಈ ಬಗ್ಗೆ ಪೊಲೀಸರ ಜೊತೆ ನಾವು ಸಭೆ ನಡೆಸಿದ್ದು, ಟ್ರಾಫಿಕ್ ನಿಯಂತ್ರಣ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.