ಕಮ್ಯುನಿಸ್ಟ್ ಪಕ್ಷದಿಂದ ಏ. 30ರಿಂದ ಜೀವಗಳ ಉಳಿಸಿ ಪರಿಹಾರ ಒದಗಿಸಿ ಅಭಿಯಾನ: ಮೇ 6ರಂದು ಪ್ರತಿಭಟನೆ

ಕಲಬುರಗಿ :ಏ.26: ಜೀವಗಳನ್ನು ಉಳಿಸಿ ಪರಿಹಾರ ಒದಗಿಸಿ ಎಂಬ ಅಭಿಯಾನವನ್ನು ಏಪ್ರಿಲ್ 30ರಿಂದ ಆರಂಭಿಸಲಾಗುವುದು. ಮೇ 6ರಂದು ಮನೆಯಿಂದಲೇ ಮನೆ ಮನೆಯಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಮ್ಯುನಿಸ್ಟ್ ಮಾರ್ಕ್‍ಸಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ತಿಳಿಸಿದ್ದಾರೆ.
ಸರ್ವರಿಗೂ ಉಚಿತ ಕೋವಿಡ್ ಲಸಿಕೆ ನೀಡುವಂತೆ, ಆಸ್ಪತ್ರೆಯಲ್ಲಿ ಉಚಿತ ಔಷಧಿ, ಆಮ್ಲಜನಕ ಪೂರೈಸುವಂತೆ, ಪ್ರತಿ ಕುಟುಂಬಕ್ಕೂ ಮಾಸಿಕ 10,000ರೂಗಳ ನಗದು ವರ್ಗಾವಣೆ ಮಾಡುವಂತೆ, ತಲಾ ಹತ್ತು ಕೆಜಿ ಉಚಿತ ಆಹಾರ ಧಾನ್ಯ ವಿತರಿಸುವಂತೆ, 200 ದಿನಗಳ ಉದ್ಯೋಗ ಖಾತ್ರಿ ಕೊಟ್ಟು 600ರೂ.ಗಳ ಕೂಲಿ ಕೊಡುವಂತೆ, ಲಾಕ್‍ಡೌನ್, ಸೆಮಿ ಲಾಕ್‍ಡೌನ್‍ನಿಂದ ಬಾದಿತ ಎಲ್ಲ ಕಾರ್ಮಿಕರಿಗೂ ಪೂರ್ಣ ವೇತನ ಖಾತ್ರಿ ಒದಗಿಸುವಂತೆ, ಮುಂಚೂಣಿ ಕಾರ್ಮಿಕರು, ಕೋವಿಡ್ ಸೇನಾನಿಗಳಿಗೆ ಅಗತ್ಯ ಸುರಕ್ಷತಾ ಕಿಟ್ ಖಾತ್ರಿಪಡಿಸುವಂತೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕರ್ನಾಟಕ ರಾಜ್ಯ ಮತ್ತೊಮ್ಮೆ ಕೋವಿಡ್-19ರ ಎರಡನೇ ಅಲೆಯ ಬಾಧೆಗೆ ಒಳಗಾಗಿರುವುದಕ್ಕೆ ನೋವು ವ್ಯಕ್ತಪಡಿಸಿದ ಅವರು, ನಿನ್ನೆ ದಿನ ಸುಮಾರು 37000 ಹೊಸ ಸೋಂಕಿತರು ಕಂಡುಬಂದಿದ್ದಾರೆ. ಕಳೆದೆರಡು ವಾರಗಳಿಂದ ಸೋಂಕಿತರ ಸಂಖ್ಯೆ ತೀವ್ರ ಆಘಾತಕಾರಿಯಾಗಿ ಬೆಳೆಯುತ್ತಲೇ ಇದೆ. ಸಾವುಗಳ ಸಂಖ್ಯೆಯೂ ಸಹ ಹೆಚ್ಚುತ್ತಲೇ ಇದೆ. ಇನ್ನು ಮುಂದೆಯೂ ಮತ್ತಷ್ಟು ವೇಗವಾಗಿ ಹೆಚ್ಚಳಗೊಳ್ಳುವ ಅಪಾಯದ ಕುರಿತು ತಜ್ಞರು ಎಚ್ಚರಿಸಿದ್ದಾರೆ. ಆದಾಗ್ಯೂ, ಕೋವಿಡ್ ಎರಡನೇ ಅಲೆಯ ಅಪಾಯದ ಕುರಿತು ಎಚ್ಚರಿಸಿದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಮುನ್ನೆಚ್ಚರಿಕೆಯನ್ನು ಸಕಾಲಕ್ಕೆ ಕೈಗೊಳ್ಳದೇ ಉದಾಸೀನ ಮಾಡಿದ್ದರಿಂದ ಜನತೆ ಸಾಂಕ್ರಮಿಕಕ್ಕೆ ವ್ಯಾಪಕವಾಗಿ ಬಲಿಯಾಗುವಂತಾಗಿದೆ ಎಂದು ಟೀಕಿಸಿದ್ದಾರೆ.
ಸರ್ಕಾರವು ಕೇವಲ ತೋರಿಕೆಯ ಆತಂಕದಿಂದ ಗಮನಿಸುತ್ತಿರುವುದು ಬಿಟ್ಟರೆ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೈಗೊಂಡ ಕ್ರಮಗಳು ಏನೇನೂ ಇಲ್ಲವಾಗಿದೆ. ಜಗತ್ತಿನ ಅನುಭವದಂತೆ ಮಾರ್ಪಾಟುಗೊಂಡ ಅಥವಾ ಎರಡನೇ ಅಲೆಯ ವೈರಾಣು ದಾಳಿ ನಿಯಂತ್ರಿಸಲು ಅದನ್ನು ಎದುರಿಸಲು ಬೇಕಾದ ಸಿದ್ಧತೆಯನ್ನು ಸರ್ಕಾರ ಮಾಡಿಕೊಳ್ಳಲಿಲ್ಲ. ಕಳೆದ ವರ್ಷದ ದಾಳಿಯ ಅನುಭವವನ್ನು ಕ್ರೋಢಿಕರಿಸಿಕೊಂಡು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಈಗ ಬೆಳೆಯುತ್ತಿರುವ ಸೋಂಕಿತರ ಸಂಖ್ಯೆಗೆ ಅನುಸಾರವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್‍ಗಳು, ಆಮ್ಲಜಕ, ಔಷಧಿಗಳು ಮತ್ತು ಶುಶ್ರೂಷಕರು ದೊರೆಯುತ್ತಿಲ್ಲ ಎಂಬುದು ಸೋಂಕಿತರ ಹಾಗೂ ಅವರ ಕುಟುಂಬದ ಸದಸ್ಯರ ಅಳಲಾಗಿದೆ. ಇದರಿಂದಾಗಿ ಹಲವು ಸೋಂಕಿತರು ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳು ಜನಗಳ ದುಸ್ಥಿತಿಯನ್ನು ಬಳಸಿಕೊಂಡು ಸುಲಿಗೆಗೆ ನಿಂತಿವೆ. ಔಷಧಿಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಬಿಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮೊದಲೇ ರಾಜ್ಯವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಜೊತೆಗೆ ಕಳೆದ ಎರಡ್ಮೂರು ವರ್ಷಗಳ ಬರಗಾಲ ಮತ್ತು ಪ್ರವಾಹಗಳು ಇನ್ನಷ್ಟು ಸಂಕಷ್ಟಗಳನ್ನು ಜನತೆಯ ಮೇಲೆ ಅದಾಗಲೇ ಹೇರಿದ್ದವು. ಕಳೆದ ವರ್ಷದಿಂದ ಕೋವಿಡ್ ಬಾಧೆ, ಅವೈಜ್ಞಾನಿಕ ಲಾಕ್‍ಡೌನ್, ಅದರ ದುಷ್ಪರಿಣಾಮಗಳು ಮತ್ತು ಇದೀಗ ಮುಂದುವರೆದ ವೈರಸ್ ದಾಳಿ ರಾಜ್ಯವನ್ನು ನಲುಗುವಂತೆ ಮಾಡಿದೆ. ಇಂತಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಪರಿಹಾರದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರೂ ಸಹ ಸರ್ಕಾರ ಗಮನವನ್ನೇ ಕೊಟ್ಟಿಲ್ಲ ಎಂದು ಅವರು ಟೀಕಿಸಿದ್ದಾರೆ.
ಜನತೆಯ ಸಂಕಷ್ಟಗಳನ್ನು ಅವರೇ ಪರಿಹರಿಸಿಕೊಳ್ಳುವಂತೆ ಸರ್ಕಾರಗಳು ನಿರ್ದಯಿಯಾಗಿ ಬಿಟ್ಟಿದೆ. ಸಾಮಾನ್ಯರು, ಬಡವರು ತಮ್ಮ ಬಳಿ ಇದ್ದ ಸಣ್ಣಪುಟ್ಟ ಆಸ್ತಿಗಳನ್ನು ಉಳ್ಳವರಿಗೆ ದುಬಾರಿ ಬಡ್ಡಿಯ ಸಾಲಕ್ಕಾಗಿ ಮಾರಾಟ ಮಾಡಿದ್ದು, ಸಾಲ ಬಾಧಿತರಾಗಿದ್ದಾರೆ. ಇದರಿಂದ ಶ್ರೀಮಂತರು ಭಾರೀ ಶ್ರೀಮಂತರಾದರೆ ಬಡವರು ಮತ್ತಷ್ಟು ಕಡುಬಡವರಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆರಡು ತಿಂಗಳಿನಿಂದ ಉದ್ಯೋಗ ಅರಸಿ ಹೊರಟಿದ್ದ ವಲಸೆ ಕಾರ್ಮಿಕರು ಬೆಳೆಯುತ್ತಿರುವ ಸೋಂಕಿನ ಕಾರಣದಿಂದ ಆತಂಕಗೊಂಡು ಮರಳಿ ಸ್ವಂತ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈಗಿನ ಲಾಕ್‍ಡೌನ್ ಕಾರಣದಿಂದ ನಿರುದ್ಯೋಗ ಮತ್ತೊಮ್ಮೆ ಬೃಹದ್ದಾಕಾರವಾಗಿ ಬೆಳೆಯಲಿದೆ. ಅವರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಮತ್ತೊಂದು ಕಡೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿ ಮಾಡುತ್ತಿರುವ ಲೂಟಿಕೋರ ಕಾರ್ಪೋರೇಟ್ ಪರವಾದ ನೀತಿಗಳು ಜನತೆಯನ್ನು ಇನ್ನಷ್ಟು ಆತಂಕಿತರನ್ನಾಗಿಸಿ ಇಂತಹ ವೈರಾಣು ದಾಳಿಯ ನಡುವೆಯೂ ಅವರು ಬೀದಿಗಿಳಿಯುವಂತೆ ಬಲವಂತ ಮಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಕೃಷಿ ಕಾಯ್ದೆಗಳನ್ನು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಕಾರ್ಮಿಕ ಸಂಹಿತೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.
ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳ ಎಲ್ಲ ರೀತಿಯ ಸಾಲಗಳನ್ನು ಕೂಡಲೇ ಮನ್ನಾ ಮಾಡುವಂತೆ, ಕೋವಿಡ್ ಮರಣಗಳಿಗೆ ಕನಿಷ್ಠ ಹತ್ತು ಲಕ್ಷ ರೂ.ಗಳ ಪರಿಹಾರ ಘೋಷಿಸುವಂತೆ ಅವರು ಆಗ್ರಹಿಸಿದ್ದಾರೆ.