ಕಮ್ಮಟಗಳು ಪರಿಪೂರ್ಣ ಭಾಷಾಂತರಕಾರರನ್ನು ಸೃಷ್ಟಿಸುವುದಿಲ್ಲ:ಡಾ.ಎ.ಮೋಹನ ಕುಂಟಾರ್

ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ15: ಯಾವುದೇ ತರಬೇತಿ ಕಮ್ಮಟಗಳು ಪರಿಪೂರ್ಣ ಭಾಷಾಂತರಕಾರರನ್ನು ಸೃಷ್ಟಿಸಲಾರದು. ತರಬೇತಿಯಿಂದ ಪಡೆದ ತಿಳುವಳಿಕೆಯನ್ನು ಪ್ರಾಯೋಗಿಕವಾಗಿ ಬಳಿಸಿಕೊಂಡಾಗ ಮಾತ್ರ ಪ್ರತಿಯೊಬ್ಬರಿಗೂ ಅದರ ಪ್ರಯೋಜನ ದೊರೆಯಬಹುದು ಎಂದು ಭಾಷಾಂತರ ಕೇಂದ್ರದ ನಿರ್ದೇಶಕ ಡಾ.ಎ.ಮೋಹನ ಕುಂಟಾರ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ) ಜಂಟಿಯಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಭಾಷಾಂತರ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.
ತರಬೇತಿಯಲ್ಲಿ ಪದ್ಯ, ಗದ್ಯ, ವರದಿಗಾರಿಕೆ ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ಪಡೆದ ಅನುಭವಗಳನ್ನು ನಿರಂತರವಾಗಿ ಕಲಿಕೆಯಲ್ಲಿ ಮುಂದುವರಿಸಿದರೆ ನಿಮ್ಮ ಔದ್ಯೋಗಿಕ ಬದುಕಿನಲ್ಲಿ ನೆರವಾಗುತ್ತದೆ ಎಂದು ಸಲಹೆ ನೀಡಿದರು.
ಎಂ.ಎಸ್ಸಿ. ಯೋಗ ವಿದ್ಯಾರ್ಥಿನಿ ಕು. ಜಯಶ್ರೀ ಮಾತನಾಡಿ ಅತ್ಯಂತ ಉಪಯುಕ್ತವಾದ ತರಬೇತಿ ಕಮ್ಮಟದಲ್ಲಿ ಎಲ್ಲಾ ಸಂಪನ್ಮೂಲ ವಿದ್ವಾಂಸರು ಮಾರ್ಗದರ್ಶನವನ್ನು ನೀಡಿದ್ದು, ಭಾಷಾಂತರದ ವಿಶಾಲವಾದ ಲೋಕವೊಂದನ್ನು ಈ ಮೂರು ದಿನಗಳಲ್ಲಿ ತೋರಿಸಿಕೊಡಲಾಗಿದೆ ಎಂದು ಹಾಗೂ ಇಂತಹ ಕಮ್ಮಟಗಳು ಶೈಕ್ಷಣಿಕ ವಲಯದಲ್ಲಿ ಇನ್ನಷ್ಟು ನಡೆಯಬೇಕಾಗಿದೆ ಎಂದು ಹೇಳಿದರು.
ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಾದ ನಾಗರಾಜ ಎಚ್.ಎ, ಬುಂಡ ಲಕ್ಷ್ಮಣ ನಾಯ್ಕ್, ಕು. ನಾಗರತ್ನ ಹೆಚ್. ಕು. ಶೀತಲ್ ಬೇಕ್ವಾಡಕರ್ ಮತ್ತು ಕು. ಜಿ. ಪ್ರಭಾಲತಾ, ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ ಹೊನ್ನಪ್ಪ ಅಭಿಪ್ರಾಯ ಹಂಚಿಕೊಂಡರು.
ಸಂಪನ್ಮೂಲ ವಿದ್ವಾಂಸರಾದ ಡಾ. ಟಿ.ಎಚ್. ಬಸವರಾಜ, ಡಾ. ಅಬ್ದುಲ್ ಸಮದ್ ಕೊಟ್ಟೂರು, ಪವನಕುಮಾರ್ ಗೌಡ ಉಪಸ್ಥಿತರಿದ್ದರು. ಐಕ್ಯುಎಸಿಯ ಸಹಾಯಕ ನಿರ್ದೇಶಕಿ ಡಿ. ಪ್ರಭಾ ಸ್ವಾಗತಿಸಿ, ವಂದಿಸಿದರು.