ಕಮೀಷನ್‌ಗಾಗಿ ಗಾಂಜಾ ಮಾರಾಟ ಆರೋಪಿ ಸೆರೆ

16KGS Ganja Vasha news photo

ಬೆಂಗಳೂರು, ಸೆ.೧೬- ಕಮೀಷನ್ ಗಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಶ್ರೀರಾಮಪುರ ಪೊಲೀಸರು, ೧೫ ಕೆ.ಜಿ. ಗಾಂಜಾ, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಶ್ರೀರಾಮಪುರದ ೯ನೇ ಕ್ರಾಸ್‌ನ ಸತ್ಯ (೨೩) ಬಂಧಿತ ಆರೋಪಿಯಾಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಕಳೆದ ಸೆ.೧೪ರಂದು ಮಧ್ಯಾಹ್ನ ೨.೧೫ರ ಸುಮಾರಿಗೆ ಶ್ರೀರಾಮಪುರದ ೫ನೇ ಮೈನ್ ಕಡೆಯಿಂದ ಓಕಳಿಪುರ ಮಾರ್ಗವಾಗಿ ಇಬ್ಬರು ವ್ಯಕ್ತಿಗಳು ದ್ವಿ ಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಶ್ರೀರಾಮಪುರ ಪಿಎಸ್ ಐ ಗಿರೀಶ್ ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ೧೫ ಕೆ.ಜಿ.ತೂಕದ ಗಾಂಜಾ ಮತ್ತು ಕಳ್ಳತನ ಮಾಡಿ ಕೃತ್ಯಕ್ಕೆ ಬಳಸಿದ ೧ ದ್ವಿಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ, ವಿಶಾಖಪಟ್ಟಣನಿಂದ ವ್ಯಕ್ತಿಯೊಬ್ಬ ತನಗೆ ಇದನ್ನು ತಂದು ಕೊಡುತ್ತಿದ್ದು, ಮಾರಾಟ ಮಾಡಿ ಕೊಟ್ಟರೆ ಅದರಿಂದ ಬರುವ ಹಣದಲ್ಲಿ ತನಗೆ ಕಮಿಷನ್ ನೀಡುವುದಾಗಿ ತಿಳಿಸಿದ್ದಾನೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆ ಕಾರ್ಯ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಶ್ರೀರಾಮಪುರ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್, ಪಿಎಸ್ ಐ ಗಿರೀಶ್ ನಾಯಕ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.