ಕಮಿಷನ್ ತಿಂದಿದ್ದು ಸಾಕು, ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಕೊಡಿ, ಡಿ.ಕೆ ಶಿ ಆಗ್ರಹ

ಬೆಂಗಳೂರು:ಏ. 30- ‘ಸಚಿವರೇ ಕಮಿಷನ್ ಲೆಕ್ಕ ಹಾಕಿಕೊಂಡು ಕೂತಿದ್ದೀರಾ? ಕಮಿಷನ್ ಹೊಡೆದಿದ್ದು ಸಾಕು. ಹಿಂದೆ ತಿಂದಿದ್ದು ಸಾಕು, ಮುಂದೆ ತಿನ್ನೋದು ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ಆಗ್ರಹಿಸಿದ್ದಾರೆ.

ಆದಷ್ಟು ಬೇಗ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿಸಿ. ಜನರ ಕಷ್ಟದ ಬಗ್ಗೆ ಗಮನ ಹರಿಸಿ’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ18 ರಿಂದ 45 ವರ್ಷದವರು ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಆನ್ ಲೈನ್ ನೋಂದಣಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ದೇಶದ ಎಲ್ಲ ವರ್ಗದ ಬಗ್ಗೆ ಯೋಚಿಸುತ್ತಿದೆಯೋ ಅಥವಾ ಒಂದು ವರ್ಗದ ಬಗ್ಗೆ ಮಾತ್ರ ಯೋಚಿಸುತ್ತಿದೆಯೇ ಎಂಬುದು ಅರ್ಥವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಆನ್ ಲೈನ್ ನೋಂದಣಿ ಮಾಡಿಸಬೇಕು ಎಂದರೆ ಬೇರೆಯವರ ಸಹಾಯ ಪಡೆಯಬೇಕಾಗುತ್ತದೆ. ಇನ್ನು ಹಳ್ಳಿ ಜನರ ಪರಿಸ್ಥಿತಿ ಏನು? ಅವರಿಗೆ ಆನ್ ಲೈನ್ ಸೌಲಭ್ಯ ಇದೆಯೇ? ಆನ್ ಲೈನ್ ನೋಂದಣಿ ಮಾಡಿದವರಿಗೆ ಮಾತ್ರ ಹಾಕುವ ಯೋಚನೆಯೋ? ಎಂದು ಪ್ರಶ್ನಿಸಿದರು.

ಮನೆ ಬಾಗಿಲಿಗೆ ಲಸಿಕೆ ಹಾಕಿ:

ಮನೆ ಬಾಗಿಲಿಗೆ ಹೋಗಿ ಪೊಲೀಯೋ ಲಸಿಕೆ ಹಾಕಿದಂತೆ ಈಗ ಕೊರೋನಾ ಲಸಿಕೆಯನ್ನೂ ನೀಡಬೇಕು ಎಂಬುದು ಕಾಂಗ್ರೆಸ್ ಅಗ್ರಹ ಎಂದರು.

ರಾಜ್ಯದಲ್ಲಿ ನಾಳೆಯಿಂದ ಲಸಿಕೆ ನೀಡಲು ಸಾಧ್ಯವಿಲ್ಲ, ವಿಳಂಬವಾಗುತ್ತದೆ ಎಂದು ಸರ್ಕಾರವೇ ಹೇಳುತ್ತಿದೆ. ಕೊರೋನಾ ಬಂದು ವರ್ಷವಾಗಿದೆ. ಆದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೇ, ಸರ್ಕಾರ ಜನರನ್ನು ಸಂಕಟಕ್ಕೆ ತಳ್ಳುತ್ತಿದೆ. ಬರೀ ಸುಳ್ಳು ಹೇಳಿ ತನ್ನ ಹುಳುಕು ಮುಚ್ಚಿಕೊಳ್ಳುತ್ತಿದೆ‌ ಎಂದರು.

ತಮ್ಮ ಕ್ಷೇತ್ರದಲ್ಲೇ 17 ಜನ ಸತ್ತಿದ್ದರೂ 4 ಜನ ಸತ್ತಿದ್ದಾರೆ ಎಂದು ಸುಳ್ಳು ಅಂಕಿ-ಅಂಶ ತೋರಿಸುತ್ತಿದೆ. ವಾಸ್ತವದ ಶೇ.20 ರಷ್ಟನ್ನು ಅಂಕಿ-ಅಂಶದಲ್ಲಿ ತೋರಿಸುತ್ತಿಲ್ಲ. ಸರ್ಕಾರ ಕೊರೋನಾ ಸಾವಿನ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಬೇಕು. ಸತ್ತವರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ, ಸಾವಿಗೆ ಕಾರಣ ತಿಳಿಯಬೇಕು. ಕಾಂಗ್ರೆಸ್ ಕಾರ್ಯಕರ್ತರು ಕೊರೋನಾ ಸಾವಿನ ವಾಸ್ತವಾಂಶವನ್ನು ಕೆಪಿಸಿಸಿ ಕಚೇರಿಗೆ ರವಾನಿಸಬೇಕು ಎಂದರು.

ಲಸಿಕೆ ವಿಚಾರದಲ್ಲಿ ಸರ್ಕಾರ ತಯಾರಿ ಮಾಡಿಕೊಳ್ಳದಿದ್ದರೂ ಲಸಿಕೆ ಅಭಿಯಾನ ಘೋಷಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತದಲ್ಲಿ ಸರಕಾರ ಕೊರೋನಾ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿವರವಾಗಿ ವರದಿ ಮಾಡುತ್ತಿವೆ ಎಂದರು.

ಸುಳ್ಳು ಹೇಳಬೇಡಿ:

ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಒಂದು ವಿಚಾರ ಕೇಳುತ್ತೇನೆ. ಈ ಪರಿಸ್ಥಿತಿ ನಿಯಂತ್ರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಾಗಿದೆ. ಆದರೂ ಯಾಕೆ ಸುಳ್ಳುಗಳನ್ನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಸರಕಾರವು ಜನರಿಗೆ ಆರ್ಥಿಕ ನೆರವು ನೀಡಬೇಕು. ಈಗಾಗಲೇ ಜನ ವಲಸೆ ಹೋಗುತ್ತಿದ್ದಾರೆ. ಕಾರ್ಮಿಕರು ಗುಳೆ ಹೋಗುವುದನ್ನು ನಿಲ್ಲಿಸಲು ಆರ್ಥಿಕ ಪ್ಯಾಕೇಜ್ ಅನಿವಾರ್ಯ ಎಂದರು.

ಕಳೆದ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಹಾಸಿಗೆ ಪಡೆದಿತ್ತು. ಈ ವರ್ಷವೂ ಶೇ. 80 ರಷ್ಟು ಪಡೆದಿದೆ. ಆದರೆ ಅವರಿಗೆ ಕಳೆದ ವರ್ಷದ ಬಾಕಿಯನ್ನೇ ಕೊಟ್ಟಿಲ್ಲ. ಈ ಆಸ್ಪತ್ರೆಗಳಲ್ಲಿ ನರ್ಸ್ ಗಳಿಗೆ ಕೊಡಲು, ಔಷದಿ, ಆಕ್ಸಿಜನ್ ಖರೀದಿಗೆ ದುಡ್ಡಿಲ್ಲದಂತಾಗಿದೆ ಎಂದರು.

ರೆಮ್ಡಿಸಿವಿಯರ್ ಪೂರೈಸುತ್ತಿರುವ ಡ್ರಗ್ ಕಂಟ್ರೋಲರ್ ಗಳ ಫೋನ್ ಆಫ್ ಆಗಿವೆ. ನೀವು ಕೆಲವು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಇವುಗಳನ್ನು ಪೂರೈಸುತ್ತಿದ್ದೀರಿ ಹೊರತು, ಬೇರೆ ಯಾರಿಗೂ ಕೊಡುತ್ತಿಲ್ಲ. ನಮಗೆ ರೆಮ್ಡಿಸಿವಿಯರ್ ಬೇಕು ಎಂದು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಆಸ್ಪತ್ರೆಗಳಿಗೂ ಇದನ್ನು ಪೂರೈಸಬೇಕು. ಕೂಡಲೇ ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಬೇಕು. ಯಾರಿಗೆ ಹಣ ಕೊಟ್ಟಿದ್ದೀರಿ ಎಂಬುದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.