ಕಮಿಷನ್ ಕೇಳಿದ್ದರೆ ರಾಜಕೀಯ ನಿವೃತ್ತಿ ಡಿಕೆಶಿ ಸವಾಲು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೧:ಗುತ್ತಿಗೆದಾರರಿಂದ ಕಮಿಷನ್ ಕೇಳಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿಯಾಗುವೆ, ಕಮಿಷನ್ ಆರೋಪ ಸುಳ್ಳು ಎಂದಾದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ನಿವೃತ್ತಿಯಾಗುತ್ತಾರಾ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. ೧೦ ರಿಂದ ೧೫ ಕಮಿಷನ್ ಕೇಳುತ್ತಿದ್ದಾರೆ ಎಂ ಆರೋಪ ಮಾಡಲಾಗಿದೆ. ಈ ಕಮಿಷನ್ ಯಾರು ಕೇಳಿದ್ದಾರೆ, ಡಿ.ಕೆ. ಶಿವಕುಮಾರ್ ಕೇಳಿದ್ದಾನಾ, ಸಿದ್ದರಾಮಯ್ಯಕೇಳಿದ್ದಾರಾ, ಮಂತ್ರಿಗಳು, ಶಾಸಕರು ಕೇಳಿದ್ದಾರಾ,ಅಧಿಕಾರಿಗಳು ಕೇಳಿದ್ದಾರಾ ಎಂದು ಹೇಳಲಿ ಎಂದರು.ನಾನು ಯಾರ ಬಳಿಯಾದರು ಕಮಿಷನ್ ಕೇಳಿದ್ದರೆ ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. ನಾನು ಕೇಳಿಲ್ಲವಾದರೆ ಬೊಮ್ಮಾಯಿ, ಅಶೋಕ್ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಾರಾ, ನಾನು ಅವರ ಸ್ಥಾನ ಹಾಗೂ ಹಿರಿತನಕ್ಕೆ ಗೌರವ ನೀಡಬೇಕು ನೀಡುತ್ತೇನೆ.ಅಶೋಕ್ ಏನೆಲ್ಲ ಮಾತಾನಾಡಿದ್ದಾರೆ ಎಂಬುದು ಗೊತ್ತಿದೆ. ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ ಎಂದರು.ಮಾಜಿ ಸಚಿವ ಆರ್. ಅಶೋಕ್ ಮಾತನಾಡಿದ್ದು ನೋಡಿದ್ದೇನೆ. ಒಂದುಕಾಲು ಲಕ್ಷ ವೋಟಲ್ಲಿ ಸೋತು ಠೇವಣಿ ಕಳೆದುಕೊಂಡು ಬಂದ ಅಶೋಕ್ ಇನ್ನೇನು ಮಾತನಾಡುತ್ತಾನೆ. ಅಶೋಕ್ ಚಕ್ರವರ್ತಿ ಪ್ರಶ್ನೆ ಕೇಳುತ್ತಿದ್ದಾನಲ್ಲ. ಅವನ ಕಾಲದಲ್ಲಿ ಬಿಲ್ ಏಕೆ ಕೊಡಲಿಲ್ಲ ಉತ್ತರ ಹೇಳಲಿ ಎಂದು ಏಕವಚನದಲ್ಲೇ ಅಶೋಕ್ ವಿರುದ್ಧ ಹರಿಹಾಯ್ದರು.
ಬೊಮ್ಮಾಯಿರವರಿಗಾಗಲಿ, ಅಶೋಕ್‌ರವರಿಗಾಗಲಿ ಅವರ ಸರ್ಕಾರದಲ್ಲಿ ಗುತ್ತಿಗೆದಾರರ ಬಿಲ್ ಪಾವತಿ ಮಾಡಲು ಯಾರು ಅಡ್ಡಿಮಾಡಿದ್ದರು. ಅವರ ಬಳಿ ಹಣ ಇರಲಿಲ್ಲವೇ, ಕೆಲಸ ಸರಿ ಇರಲಿಲ್ಲವೆ, ಈ ಪ್ರಶ್ನೆಗೆ ಬಿಜೆಪಿ ನಾಯಕರು ಮೊದಲು ಉತ್ತರ ಕೊಡಲಿ ಉಳಿದಂತೆ ಗುತ್ತಿಗೆದಾರರಿಗೆ ನಾನು ಉತ್ತರ ನೀಡುತ್ತೇನೆ ಎಂದರು.
ನಮ್ಮ ಸರ್ಕಾರ ಬಂದನಂತರ ಮುಖ್ಯಮಂತ್ರಿಗಳು ಕೆಂಪಣ್ಣ ಅವರ ದೂರಿನ ಆಧಾರದ ಮೇಲೆ ಕೆಲಸ ಆಗಿದೆಯೇ ಇಲ್ಲವೇ ಎಂದು ನೈಜ್ಯತೆ ಪರಿಶೀಲನೆಮಾಡಿ ಎಂದು ತಿಳಿಸಿದರು.ಬಿಜೆಪಿ ನಾಯಕರು ಸದನದಲ್ಲಿ ಕಾಮಗಾರಿಗಳ ಅಕ್ರಮಗಳ ಬಗ್ಗೆ ತನಿಖೆಗೆ ಮನವಿ ಮಾಡಿದ್ದರು. ಹೀಗಾಗಿ ನಾವು ತನಿಖಾ ಸಮಿತಿ ರಚನೆ ಮಾಡಿದ್ದೀವಿ ಎಂದರು.
ತನಿಖೆ ಒಂದೆರೆಡು ಕಡೆ ಮಾತ್ರ ಮಾಡುವುದಿಲ್ಲ, ಎಲ್ಲ ಕಡೆ ಮಾಡಲಾಗುತ್ತದೆ, ಕೆಲಸ ಮಾಡಿದ್ದರೆ ಬಿಲ್ ಪಾವತಿ ಆಗಲಿದೆ. ಈಗ ಒಂದೆರೆಡು ತಿಂಗಳು ಕಾಯಲಾಗುವುದಿಲ್ಲವೇ ಗುತ್ತಿಗೆದಾರರು ನೇಣುಹಾಕಿಕೊಳ್ಳುವುದೂ ಬೇಡ, ದಯಾಮರಣ ಕೇಳುವುದೂ ಬೇಡ ಅವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ ಎಂದರು.
ಕಮಿಷನ್ ವಿಚಾರದಲ್ಲಿ ಶಾಂಘಿಲಾ ಹೋಟೆಲ್‌ನಲ್ಲಿ ಮೀಟಿಂಗ್ ಮಾಡಿದ್ದು ನಿಮ್ಮ ಪರವಾಗಿ ಅಧಿಕಾರಿಯೊಬ್ಬರು ಬಂದು ಕಮಿಷನ್ ಕೇಳುತ್ತಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರಲ್ಲ ಎಂದು ಗಮನ ಸೆಳೆದಾಗ ಕೆಂಪಣ್ಣ ಅವರು ಗೌರವಯುತ ವ್ಯಕ್ತಿ, ನಾನು ಅವರ ಬಗ್ಗೆ ನಾನು ಮಾತನಾಡಲ್ಲ ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಲ್ಲ, ಅವರಿಗೆ ಯಾವ ಅಧಿಕಾರಿ ಹೇಳಿದ್ದಾರೋ ಆ ಬಗ್ಗೆ ಒಂದು ಅಫಿಡೆವಿಟ್ ಹಾಗೂ ದೂರು ಸಲ್ಲಿಸಲು ಹೇಳಿ ಎಂದು ಡಿ.ಕೆ ಶಿವಕುಮಾರ್ ಉತ್ತರಿಸಿದರು.
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ನೀವು ಅಜ್ಜಯ್ಯನ ಮೇಲೆ ಆಣೆ, ಪ್ರಮಾಣ ಮಾಡುವಂತೆ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ ರಸ್ತೆಯಲ್ಲ್ಲಿಹೋಗುವ ಯಾರದೋ ಮಾತಿಗೆಲ್ಲ ನಾನು ಉತ್ತರ ನೀಡಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡಲಿ ನಾನು ಉತ್ತರ ನೀಡುತ್ತೇನೆ ಯಾರಿಗೆ ಉತ್ತರ ನೀಡಬೇಕೆಂಬುದು ನನಗೆ ಗೊತ್ತಿದೆ ಎಂದರು.