ಕಮಿಷನ್ ಆಸೆಗಾಗಿ ಕಾಮಗಾರಿಗೆ ತಡೆಆಳಂದನಲ್ಲಿ ಬಿ ಆರ್ ಪಾಟೀಲರಿಂದ ದ್ವೇಷದ ರಾಜಕಾರಣ: ಹರ್ಷಾ ಗುತ್ತೇದಾರ

ಕಲಬುರಗಿ:ಜೂ.9:ಆಳಂದ ಮತಕ್ಷೇತ್ರದಲ್ಲಿ ಶಾಸಕ ಬಿ ಆರ್ ಪಾಟೀಲ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಅಲ್ಲದೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಗೆತನ ಸಾಧಿಸುತ್ತಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್ ಗುತ್ತೇದಾರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ತಂದೆಯವರ ಅವಧಿಯಲ್ಲಿ ಮಂಜೂರಿಯಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಕಮಿಷನ್ ಆಸೆಗಾಗಿ ತಡೆ ನೀಡುತ್ತಿದ್ದಾರೆ. ಈಗ ಪ್ರಗತಿಯಲ್ಲಿರುವ ಮತ್ತು ಆರಂಭವಾಗಬೇಕಿರುವ ಕಾಮಗಾರಿಗಳು ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ ಮುಗಿಸಬೇಕಿದೆ ಆದರೆ ವಿನಾಕಾರಣ ಹಗೆತನ ಸಾಧಿಸಲು, ಕಮಿಷನ್ ಪಡೆಯಲು ಕಾಮಗಾರಿಗಳಿಗೆ ತಡೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಯಲ್ಲಿ 20 ಜನ ಕಾರ್ಯಕರ್ತರನ್ನು ನೇಮಿಸಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಶಾಸಕ ಬಿ ಆರ್ ಪಾಟೀಲ, ಆರ್ ಕೆ ಪಾಟೀಲ ಸೆಕ್ಷನ್ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರನ್ನು ಕರೆದುಕೊಂಡು ಹೋಗಿ ಇಲ್ಲ ಸಲ್ಲದ ನೆಪ ಹೇಳಿ ಬಿಲ್ ಬರೆಯುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಅಲ್ಲದೇ ತಮಗೆ 15% ಕಮಿಷನ್ ನೀಡಬೇಕೆಂದು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಆಗಿದ್ದರೇ ನಿಷ್ಪಕ್ಷಪಾತ ತನಿಖೆಯಾಗಲಿ ಆದರೆ ರಾಜಕೀಯ ಪ್ರೇರಿತವಾಗಿ ಕಾಮಗಾರಿಗಳಿಗೆ ಹೆಸರು ಇಡುವುದಾಗಿದ್ದರೇ ಅದನ್ನು ನಾವು ಖಂಡಿಸುತ್ತೇವೆ. ಆಳಂದ ತಾಲೂಕಿನಲ್ಲಿ ಅಧಿಕಾರಿಗಳನ್ನು ಬೈಯ್ಯುವುದು, ಹೆದರಿಸುವುದು ಮಾಡಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಶಾಸಕ ಬಿ ಆರ್ ಪಾಟೀಲ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಕೆಲವು ನಿರ್ದಿಷ್ಟ ಕಾಮಗಾರಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಉದ್ಯೋಗ ಖಾತರಿ ಯೋಜನೆಯಲ್ಲಿ ಬಿಜೆಪಿ ಪರವಾಗಿ ಓಡಾಡಿದ ಕಾರ್ಯಕರ್ತರ ಮತ್ತು ಮತದಾರರ ಹೆಸರನ್ನು ಗೈರು ಹಾಜರಿ ಎಂದು ಉದ್ದೇಶಪೂರ್ವಕಾಗಿ ಹಾಕಿಸುತ್ತಿದ್ದಾರೆ. ಬಿ ಆರ್ ಪಾಟೀಲರಿಗೆ ರಾಜಕೀಯ ದ್ವೇಷವಿದ್ದರೇ ನಮ್ಮ ಮೇಲೆ ತಿರಿಸಿಕೊಳ್ಳಲಿ ಅದನ್ನು ಎದುರಿಸಲು ನಾವು ಸಿದ್ದರಿದ್ದೇವೆ ಆದರೆ ಬಡವರ ಮೇಲೆ ಹಗೆತನ ಸಾಧಿಸಬೇಡಿ ಎಂದು ಹೇಳಿದ್ದಾರೆ.

ಆಳಂದ ಪಟ್ಟಣದಲ್ಲಿ ಗುಂಡಾಗಿರಿ ಹೆಚ್ಚಾಗುತ್ತಿದೆ ಪಟ್ಟಣದಲ್ಲಿ ರಾತ್ರಿ 2 ಗಂಟೆವರೆಗೂ ಗುಂಡಾಗಳು ಸಂಚರಿಸುತ್ತಿದ್ದಾರೆ. ಪಟ್ಟಣದ ರಜವಿ ರಸ್ತೆ, ಬಸ್ ನಿಲ್ದಾಣ, ದರ್ಗಾ ಬೇಸ್ ಸೇರಿದಂತೆ ಪ್ರಮುಖ ಆಯಕಟ್ಟಿನ ಸ್ಥಳದಲ್ಲಿ ಸಾಯಂಕಾಲ 7 ಗಂಟೆಗೆ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಈ ಕುರಿತು ಕ್ರಮಕೈಗೊಳ್ಳಬೇಕು. ಶಾಸಕ ಬಿ ಆರ್ ಪಾಟೀಲರಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಏಕೆಂದರೆ ಗುಂಡಾಗಳ ರಕ್ಷಣೆ ಮಾಡುವವರೇ ಬಿ ಆರ್ ಪಾಟೀಲ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಆರಂಭದಲ್ಲಿಯೇ ತಾಲೂಕಿನಲ್ಲಿ ದೌರ್ಜನ್ಯ, ಭ್ರಷ್ಟಾಚಾರ ವ್ಯಾಪಕವಾಗಿ ಕಂಡು ಬರುತ್ತಿದೆ. ಪರ್ಸೆಂಟೆಜ್ ಆಸೆಗಾಗಿ ಜನೋಪಯೋಗಿ ಕಾಮಗಾರಿಗಳಿಗೆ ತಡೆ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಜೊತೆಗೂಡಿ ನಿಮ್ಮ ಎಲ್ಲ ಕಾಮಗಾರಿಗಳ ಮೇಲೆ ಕಣ್ಣಿಡುತ್ತೇವೆ. ಕಳಪೆ ಕಾಮಗಾರಿಗಳ ವಿರುದ್ಧ, ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತೇವೆ ಅಲ್ಲದೇ ನಮ್ಮ ಕಾರ್ಯಕರ್ತರ ಜೊತೆ ಪಕ್ಷ ಮತ್ತು ತಾವು ನಿಲ್ಲುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರು, ದ್ವೇಷದ ಅಂಗಡಿ ಬಂದ ಮಾಡಿ ಪ್ರೀತಿಯ ಅಂಗಡಿ ತೆರೆದಿದ್ದೇವೆ ಎಂದು ಹೇಳುತ್ತಾರೆ ಆದರೆ ಆಳಂದನಲ್ಲಿ ಶಾಸಕ ಬಿ ಆರ್ ಪಾಟೀಲರು ದ್ವೇಷದ ಮಾರುಕಟ್ಟೆಯನ್ನೇ ತೆರೆಯುತ್ತಿದ್ದಾರೆ ಅಲ್ಲದೇ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಅವರದೇ ಪಕ್ಷದ ಶಾಸಕರಿಗೆ ಈ ಬಗ್ಗೆ ಸ್ವಲ್ಪ ತಿಳಿಸಿ ಹೇಳಲಿ ಎಂದು ಕಟುಕಿದ್ದಾರೆ.

ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿ ಮಾಡದೇ ಈಗ ಷರತ್ತು ವಿಧಿಸುತ್ತಿದೆ ಇದರ ವಿರುದ್ಧ ಭಾರತೀಯ ದಂಡ ಸಂಹಿತೆ 420ರ ಅನ್ವಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು ಏಕೆಂದರೆ ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಮೋಸ ಮಾಡಿದೆ. ರಾಜ್ಯ ಸರ್ಕಾರ ಹಿಂದಿನ ಸರ್ಕಾರದ ಕಾಮಗಾರಿಗಳ ತನಿಖೆ ಮಾಡಿಸುವುದರ ಉದ್ದೇಶ ಗ್ಯಾರಂಟಿ ಯೋಜನೆಗಳನ್ನು ಜನರ ಮನಸ್ಸಿನಿಂದ ಬದಲಾಯಿಸುವುದಾಗಿದೆ ಎಂದು ಆರೋಪಿಸಿದ್ದಾರೆ.