ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

ಚೆನ್ನೈ, ಅ 31 – ‘ವಿಶ್ವರೂಪಂ-2’ ಚಿತ್ರದ ಬಳಿಕ ನಿರ್ದೇಶಕ ಶಂಕರ್ ಜೊತೆ ‘ಇಂಡಿಯನ್-2’ ಸಿನಿಮಾ ಮಾಡುತ್ತಿರುವ ಗ್ಲೋಬಲ್ ಸ್ಟಾರ್ ಕಮಲ ಹಾಸನ್ ಈಗ ಮತ್ತೊಂದು ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ.

ಕಮಲ ಹಾಸನ್ ಅವರ ಮುಂದಿನ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ. ನವೆಂಬರ್ 7 ರಂದು ಕಮಲ್ ಹಾಸನ್ ಅವರ 66ನೇ ಹುಟ್ಟುಹಬ್ಬದ ಪ್ರಯುಕ್ತ, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಇದು ಕಮಲ ಹಾಸನ್ ವೃತ್ತಿ ಜೀವನದ 232ನೇ ಚಿತ್ರವಾಗಿದ್ದು, ಅನಿರುದ್ಧ್ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಲೋಕೇಶ್-ಕಮಲ್ ಕಾಂಬಿನೇಷನ್ ಸಿನಿಮಾ ರಾಜಕೀಯ ಥ್ರಿಲ್ಲರ್ ಆಗಿದೆ ಎನ್ನಲಾಗಿದೆ.

ಸದ್ಯ ಲೋಕೇಶ್ ಕನಕರಾಜ್ ತಮಿಳು ನಟ ವಿಜಯ್ ನಟನೆಯ ‘ಮಾಸ್ಟರ್’ ಚಿತ್ರ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ ಕೊನೆಯ ಹಂತದಲ್ಲಿದೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯುತ್ತಿದ್ದ ಕಮಲ್ ಹಾಸನ್ ಚಿತ್ರವನ್ನು ಆರಂಭಿಸಲಿದ್ದಾರೆ.