ಕಮಲ ಬಿಟ್ಟು ಕೈ ಹಿಡಿದ ಸವದಿ

ಬೆಂಗಳೂರು,ಏ.೧೪:ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕೈ ಹಿಡಿಯಲಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಸವದಿ ಅವರು ಬಿಜೆಪಿ ಬಿಡುತ್ತಿರುವುದು ಬಿಜೆಪಿಗೆ ಆಘಾತ ತಂದಿದೆ. ಪ್ರಬಲ ನಾಯಕರಾಗಿದ್ದ ಸವದಿ ಸೇರ್ಪಡೆ ಕಾಂಗ್ರೆಸ್‌ಗೆ ಹೆಚ್ಚಿನ ಬಲ ತುಂಬುವ ಜತೆಗೆ ಚುನಾವಣೆಯಲ್ಲೂ ಲಾಭ ತಂದುಕೊಡುವ ಸಾಧ್ಯತೆ ಇದೆ.ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿಗೆ ರಾಜೀನಾಮೆ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದು, ಸವದಿ ಅವರನ್ನು ಸೆಳೆಯುವಲ್ಲಿ ಕೈ ನಾಯಕರು ಯಶಸ್ವಿಯಾಗಿದ್ದಾರೆ.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ನಿವಾಸದಲ್ಲಿ ಕೈ ನಾಯಕರು ಸವದಿ ಅವರ ಜತೆ ಚರ್ಚೆ ನಡೆಸಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆಯಾಗುವಂತೆ ಮನವೊಲಿಸುವಲ್ಲಿ ಸಫಲರಾಗಿದ್ದು, ಸವದಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಒಪ್ಪಿದ್ದಾರೆ ಎಂದು ಈ ಸಭೆಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.ಸವದಿ ಅವರ ಜತೆ ಸೌಹಾರ್ದಯುತವಾಗಿ ಮಾತುಕತೆಗಳು ನಡೆದಿವೆ. ಅವರು ಕಾಂಗ್ರೆಸ್ ಕುಟುಂಬದ ಸದಸ್ಯರಾಗಲು ಒಪ್ಪಿದ್ದಾರೆ. ಕಾಂಗ್ರೆಸ್ ಪಕ್ಷೆ ಎಲ್ಲ ರೀತಿಯ ಗೌರವ-ಘನತೆಯನ್ನು ನೀಡಲಿದೆ. ಅವರ ಪಕ್ಷ ಸೇರ್ಪಡೆಗೆ ತುಂಬುಹೃದಯದ ಸ್ವಾಗತ ಎಂದರು.
ಸವದಿ ಅವರು ಇಂದು ಸಂಜೆ ೪ ಗಂಟೆಗೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದು, ಸಂಜೆ ೪.೩೦ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರುವರು ಎಂದರು.ಸವದಿ ಪಕ್ಷ ಸೇರ್ಪಡೆಗೆ ಸತೀಶ್ ಜಾರಕಿಹೊಳಿ ಅವರ ವಿರೋಧವಿದೆ ಎಂಬ ವರದಿಗಳು ಆಧಾರರಹಿತ. ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿಕೊಳ್ಳುವಂತೆ ಹೇಳಿದ್ದರು ಎಂದರು.ಇಡೀ ರಾಷ್ಟ್ರ, ರಾಜ್ಯ ಎಲ್ಲ ಕಾಂಗ್ರೆಸ್ ನಾಯಕರು ಸವದಿ ಅವರಿಗೆ ತುಂಬು ಹೃದಯದ ಸ್ವಾಗತ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಲಕ್ಷ್ಮಣ್ ಸವದಿ ಅವರ ಜತೆ ಬಿಜೆಪಿಯ ಇನ್ನೂ ಹಲವರು ಕಾಂಗ್ರೆಸ್ ಸೇರುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯರವರು ಸವದಿ ಅವರನ್ನು ಬಿಜೆಪಿ ನಾಯಕರು ಬಹಳ ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬರುವುದಕ್ಕೆ ಸ್ವಾಗತ ಎಂದರು.
ರಹಸ್ಯ ಸ್ಥಳದಲ್ಲಿ ಚರ್ಚೆ
ಬೆಳಗಾವಿಯಿಂದ ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಜತೆ ಬೆಂಗಳೂರಿಗೆ ಆಗಮಿಸಿದ ಅವರು, ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ರಹಸ್ಯ ಸ್ಥಳಕ್ಕೆ ತೆರಳಿ ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರ ಜತೆ ಚರ್ಚೆ ನಡೆಸಿ ಅಲ್ಲಿಂದ ಒಂದೇ ಕಾರಿನಲ್ಲಿ ಎಲ್ಲರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ನಿವಾಸಕ್ಕೆ ಆಗಮಿಸಿದರು.ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯರವರ ನಿವಾಸದಲ್ಲಿ ಸವದಿ ಎಲ್ಲರ ಜತೆ ಚರ್ಚೆ ನಡೆಸಿ ಬೆಳಗಾವಿಯ ಕಾಗವಾಡ, ರಾಮದುರ್ಗ, ಅಥಣಿ, ಸವದತ್ತಿ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ನೀಡಿ ಎಂಬ ಬೇಡಿಕೆ ಇಟ್ಟು ಈ ೪ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಕೈ ನಾಯಕರಿಗೆ ನೀಡಿದ್ದಾರೆ.
ಲಕ್ಷ್ಮಣ್‌ಸವದಿ ಅವರು ಬೆಳಗಾವಿಯಿಂದ ಆಗಮಿಸಿದ ವಿಶೇಷ ವಿಮಾನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಬುಕ್ ಮಾಡಲಾಗಿತ್ತು.

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಮುಖಂಡ ಲಕ್ಷಣ ಸವಧಿ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರ ಮುಖಂಡರು ಇದ್ದಾರೆ.

ಷರತ್ತು ಇಟ್ಟಿಲ್ಲ: ಸವದಿ
ಕಾಂಗ್ರೆಸ್ ಪಕ್ಷ ಸೇರಲು ಯಾವುದೇ ಷರತ್ತುಗಳನ್ನಿಟ್ಟಿಲ್ಲ. ಆದರೆ, ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕೇಳಿದ್ದೇನೆ. ಹಾಗೆಯೇ, ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕು, ಕ್ಷೇತ್ರದ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ನೆರವಾಗಬೇಕು ಎಂದು ಕೈ ನಾಯಕರಲ್ಲಿ ಹೇಳಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದರು.ಬಿಜೆಪಿಯವರು ಕೊಟ್ಟ ಮಾತಿಗೆ ತಪ್ಪಿದರು. ಹಾಗಾಗಿ, ಕಾಂಗ್ರೆಸ್ ಸೇರುತ್ತಿದ್ದೇನೆ. ಈ ಹಿಂದೆ ಉಪ ಚುನಾವಣೆ ಸಂದರ್ಭದಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಕಣಕ್ಕಿಳಿಸುವಾಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಮಗೇ ಟಿಕೆಟ್ ಕೊಡುತ್ತೇವೆ. ನಿಮ್ಮ ವಿಧಾನ ಪರಿಷತ್ ಸದಸ್ಯತ್ವದ ಬಾಕಿ ಅವಧಿಗೆ ಮಹೇಶ್ ಕುಮಟಳ್ಳಿ ಅವರನ್ನು ನಿಯುಕ್ತಿ ಮಾಡುತ್ತೇವೆ. ನೀವೆ ಚುನಾವಣಾ ಅಭ್ಯರ್ಥಿ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಅವರು ತಮ್ಮ ಮಾತಿನಂತೆ ನಡೆದಿಲ್ಲ. ಹಾಗಾಗಿ, ಪಕ್ಷ ಬಿಡುತ್ತಿದ್ದೇನೆ ಎಂದರು. ಬಿಜೆಪಿ ಸರ್ಕಾರ ಬರಲು ಕಾರಣರಾದ ಎಲ್ಲರಿಗೂ ಟಿಕೆಟ್ ನೀಡಬೇಕು. ಹಾಗಾಗಿ. ನಿಮಗೆ ಟಿಕೆಟ್ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಸುಳ್ಳು. ಹಾಗಾದರೆ ಆರ್. ಶಂಕರ್, ಹೆಚ್. ನಾಗೇಶ್‌ಗೆ ಟಿಕೆಟ್ ಏಕೆ ಕೊಡಲಿಲ್ಲ. ಬೇರೆಯವರಿಗೆ ಒಂದು ನ್ಯಾಯ, ಸವದಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರು. ಇದು ನನಗೆ ಮಾಡಿದ ಅಪಮಾನವಲ್ಲವೇ? ನಾನೇನು ಭ್ರಷ್ಟಾಚಾರ ಮಾಡಿದ್ದೆನಾ ಎಂದು ಸವದಿ ಪ್ರಶ್ನಿಸಿದರು.
ಪಕ್ಷ ಬಿಡುತ್ತಿರುವುದಕ್ಕೆ ಬಿಜೆಪಿ ನಾಯಕರ ಡಬಲ್ ನಿಲುವುಗಳು ಕಾರಣ. ಯಡಿಯೂರಪ್ಪ ಸೇರಿದಂತೆ ಯಾವುದೇ ಹಿರಿಯ ನಾಯಕರು ತಮ್ಮ ಜತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಸವದಿ ಅವರು ಬಿಜೆಪಿ ಬಿಡುತ್ತಿರುವುದಕ್ಕೆ ದುಃಖವಾಗಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಮಾತಿಗೆ ಪ್ರತಿಕ್ರಿಯಸಿದ ಅವರು, ಬೊಮ್ಮಾಯಿರವರಿಗೆ ಸಾಂತ್ವನ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇಂದು ಸಂಜೆ ಕಾಂಗ್ರೆಸ್ ಸೇರುತ್ತೇನೆ ಎಂದರು.

ದುಃಖವಾಗಿದೆ: ಬೊಮ್ಮಾಯಿ
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುತ್ತಿರುವುದು ತಮಗೆ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿತ್ತು. ಆದರೆ, ಅವರು ಬಿಜೆಪಿ ಬಿಡುತ್ತಿರುವುದು ದುಃಖ ತಂದಿದೆ. ರಾಜಕೀಯ ಭವಿಷ್ಯಕ್ಕಾಗಿ ಸವದಿ ಅವರು ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ ಎಂದು ಹೇಳಿದರು.