ಕಮಲ ಕೆಸರಿನಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ಕೈ( ಕಾಂಗ್ರೆಸ್) ದಾನ ಧರ್ಮಕ್ಕಾಗಿ ಅಧಿಕಾರದಲ್ಲಿದ್ದರೆ ಚಂದ : ಡಿ ಕೆ ಶಿವಕುಮಾರ.

ಅಥಣಿ : ಮಾ.8:ಕಮಲ ಕೆಸರಿನಲ್ಲಿದ್ದರೆ ಚಂದ, ತೆನೆಯು ಹೊಲದಲ್ಲಿದ್ದರೆ ಚಂದ, ಕೈ( ಕಾಂಗ್ರೆಸ್) ದಾನ ಧರ್ಮಕ್ಕಾಗಿ ಅಧಿಕಾರದಲ್ಲಿದ್ದರೆ ಚಂದವೋ ಚಂದ ಎಂಬ ನಾಣ್ನುಡಿಯಂತೆ ರಾಜ್ಯದ ಮತದಾರರು ಸ್ಪಷ್ಟ ಬಹುಮತ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಸದಾ ಸುಳ್ಳು ಭರವಸೆಗಳನ್ನ ನೀಡುವ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ನಡೆಸಿರುವುದನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದು ಉಪಮುಖ್ಯಮಂತ್ರಿ, ಬೃಹತ್ ನೀರಾವರಿ ಸಚಿವ ಡಿ.ಕೆ ಶಿವಕುಮಾರ ಹೇಳಿದರು.
ಅವರು ಬುಧವಾರ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಈ ಹಿಂದೆ ಯಾವುದೇ ಜನಪರ ಅಭಿವೃದ್ಧಿ ಇಲ್ಲದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಯಾತ್ರೆಯನ್ನ ಬೆಳಗಾವಿಯಿಂದ ಆರಂಭಿಸುವ ಮೂಲಕ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಥಮ ಗ್ಯಾರಂಟಿ ಯೋಜನೆಯಾದ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಯಿತು. ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಇಂದು ಮನೆ ಮನೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹಂತ ಹಂತವಾಗಿ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ, ಕುಟುಂಬದ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡುವ ಗ್ರಹಲಕ್ಷ್ಮಿ ಯೋಜನೆ, ನಿರುದ್ಯೋಗಿ ಯುವಕರಿಗೆ ಯುವ ನಿಧಿ, ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ತೆನೆಯನ್ನು (ಜೆಡಿಎಸ್ ) ಬಿಟ್ಟು ಇಂದು ಮುದುಡಿದ ಕಮಲದ ಬೆನ್ನು ಹತ್ತಿದ್ದಾರೆ. ಬಿಜೆಪಿಯನ್ನು ಟೀಕಿಸುತ್ತಿದ್ದ ಅವರು ಇಂದು ಅದೇ ಪಕ್ಷದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು ಸರ್ವಜ್ಞನ ವಚನ ಹೇಳುವ ಮೂಲಕ ನಾವು ನಂಬಿಕೆಯನ್ನ ಇಟ್ಟುಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ನಾವು ಬಿಜೆಪಿಯವರಂತೆ ದೇವರ ಹೆಸರಿನಲ್ಲಿ, ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುವುದಿಲ್ಲ. ನಾವು ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತೇವೆ. ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ಯಾವುದೇ ಮಹತ್ವದ ಹುದ್ದೆ ಮತ್ತು ಮಂತ್ರಿ ಸ್ಥಾನ ಬೇಡದೆ ಮತಕ್ಷೇತ್ರದ ಅಭಿವೃದ್ಧಿಯನ್ನು ಬಯಸಿದರು. ಪಶು ವೈದ್ಯಕೀಯ ಮಹಾವಿದ್ಯಾಲಯದ ಉದ್ಘಾಟನಾ ಸಂದಂರ್ಭದಲ್ಲಿ ಕೇಳಿದ ಮನವಿಯಂತೆ ಈ ಭಾಗದಲ್ಲಿ ಸು. 1486 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.
ಈ ವೇಳೆ ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮಾತನಾಡಿ ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಾಗ ಯಾವುದೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡದೇ ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಒದಗಿಸುವ ಮೂಲಕ ಕ್ಷೇತ್ರದ ಮತದಾರರ ಋಣ ತೀರಿಸಲು ಸಹಕರಿಸುವಂತೆ ಕೇಳಿದ್ದರು.
ಅವರು ಜನಪರ ಕಾಳಜಿಯುಳ್ಳ ರಾಜಕಾರಣಿಯಾಗಿದ್ದಾರೆ. ಪಕ್ಕದ ಕ್ಷೇತ್ರದಲ್ಲಿ ನಾನು ಮಾಡಿರುವ ನೀರಾವರಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮತಕ್ಷೇತ್ರದಲ್ಲಿಯೂ ಕೂಡ ಒಣ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಹಗಲು ಶ್ರಮಿಸುತ್ತಿದ್ದಾರೆ. ಅವರ ಬೇಡಿಕೆಗೆ ತಕ್ಕಂತೆ ಇಂದು ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳು 1486 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಯೋಜನೆ ಸಾಕಾರಗೊಂಡ ನಂತರ ಈ ಭಾಗದ ರೈತರು ನೀರಾವರಿ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಸದೃಢತೆ ಹೊಂದಿದ್ದಾರೆ. ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನನ್ನ ಮತ ಕ್ಷೇತ್ರದಲ್ಲಿ ಗಲಗಲಿ ಬ್ಯಾರೇಜ್ 2 ಮೀಟರ್ ಎತ್ತರಿಸಲಾಗಿದೆ. ಇದಲ್ಲದೆ ಗಡಿಭಾಗದ ಮಹಾರಾಷ್ಟ್ರದ ಅನೇಕ ಹಳ್ಳಿಗಳ ಕನ್ನಡಿಗರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದೇವೆ. ನನ್ನ ಅಧಿಕಾರ ಅವಧಿಯಲ್ಲಿ 3600 ಕೋಟಿ ರೂಪಾಯಿ ಅನುದಾನದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಇದಲ್ಲದೆ ಗಡಿಭಾಗದ ಸುಮಾರು 900 ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ್ದೇನೆ. ಈ ನಿಟ್ಟಿನಲ್ಲಿ ಲಕ್ಷ್ಮಣ ಸೌದಿ ಅವರು ಕೂಡ ಶ್ರಮಿಸುತ್ತಿದ್ದಾರೆ. ಅವರು ಒಳ್ಳೆಯ ಸಂಘಟನಾ ಚತುರರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಆನೆ ಬಲ ಬಂದಂತಾಗಿದ್ದು, ಅವರಿಗೂ ಕೂಡ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಅವಕಾಶಗಳು ಸರಕಾರದಲ್ಲಿ ದೊರಕಲಿವೆ ಎಂದರು.


ಶಾಸಕ ಲಕ್ಷ್ಮಣ ಸವದಿ ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ : ಡಿಕೆಶಿ

ಲಕ್ಷ್ಮಣ ಸವದಿ ಅವರು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಕ್ಷೇತ್ರದ ಮತದಾರರು 76 ಸಾವಿರ ದಾಖಲೆಯ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿದ್ದೀರಿ. ಒವರು ಎಂದು ಮಂತ್ರಿ ಸ್ಥಾನ ಕೇಳಲಿಲ್ಲ ಅವರಿಗೆ ನಮ್ಮ ಸರಕಾರದಲ್ಲಿ ಈಗ ಮಂತ್ರಿ ಸ್ಥಾನ ಸಿಗದೇ ಇರಬಹುದು, ಆದರೆ ಮುಂದಿನ ದಿನಮಾನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆಗಿರಲಿ ಅವರಿಗೆ ಅತ್ಯಂತ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಸಭಿಕರಲ್ಲಿ ಮನವಿ ಮಾಡಿದರು.