ಕಮಲ ಆಪರೇಷನ್, ಕೈ ಹುಷಾರ್

ಬೆಂಗಳೂರು,ಮೇ೧೨:ಕಾಂಗ್ರೆಸ್ ಪಕ್ಷ ಈ ಬಾರಿ ಆಪರೇಷನ್ ಕಮಲದ ಬಗ್ಗೆ ಹುಷಾರಾಗಿರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ಬರ್ ಹೇಳಿದರು. ಬೆಂಗಳೂರಿನಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ೧೩೦ ಸ್ಥಾನಗಳನ್ನು ಗೆಲ್ಲುತ್ತದೆ. ಮತಗಟ್ಟೆ ಸಮೀಕ್ಷೆಯನ್ನು ನೋಡಿ ನಾನು ಈ ಮಾತನ್ನು ಹೇಳುತ್ತಿಲ್ಲ. ಜಿಲ್ಲಾವಾರು ಕಾರ್ಯಕರ್ತರಿಂದ ಮಾಹಿತಿ ತರಿಸಿದ್ದೇವೆ. ೧೩೦ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.
ದಲಿತ ಮುಖ್ಯಮಂತ್ರಿ ಬಗ್ಗೆ ನಾನು ಮಾತನಾಡಲ್ಲ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅವರು ಹೇಳಿದರು.
ಬಿಜೆಪಿಯ ಆರ್. ಅಶೋಕ್ ಈ ಬಾರಿ ಕಪ್ ನಮ್ಮದೇ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಪ್ ಎಲ್ಲವೂ ಅವರದ್ದೇ, ಆದರೆ, ಸರ್ಕಾರ ಮಾತ್ರ ನಮ್ಮದು ಎಂದರು.