ಕಮಲ್ ಆಪ್ತ ಅರುಣಾಚಲಂ ಬಿಜೆಪಿ ಸೇರ್ಪಡೆ

ಚನ್ನೈ, ಡಿ. ೨೫- ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ನಡೆಸಿದ್ದ ನಟ ಕಮಲ್‌ಹಾಸನ್ ಅವರಿಗೆ ಆರಂಭಿಕ ಹಿನ್ನಡೆಯಾಗಿದ್ದು, ಅವರ ಪರಮಾಪ್ತ ಅರುಣಾಚಲಂ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮಕ್ಕಳನೀದಿ ಮಯ್ಯಮ್ (ಎಂ.ಎನ್.ಎಂ.) ಪಕ್ಷ ಸ್ಥಾಪಿಸಿ ನಟ ಕಮಲ್‌ಹಾಸನ್ ಅವರ ಆಪ್ತ ಹಾಗೂ ಎಂಎನ್‌ಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರುಣಾಚಲಂ ಕಮಲ್‌ಹಾಸನ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಚನ್ನೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸಮ್ಮುಖದಲ್ಲಿ ಅರುಣಾಚಲಂ ಬಿಜೆಪಿಗೆ ಸೇರ್ಪಡೆಯಾದರು.
ಬರುವ ೨೦೨೧ರಲ್ಲಿ ಮುಂದಿನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಟ ಕಮಲ್‌ಹಾಸನ್ ಮುಂದಾಗಿದ್ದು, ಏಕಾಏಕಿ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ಬಿಜೆಪಿಗೆ ಸೇರ್ಪಡೆಯಾಗಿರುವುದು ಕಮಲ್‌ಹಾಸನ್ ಅವರಿಗೆ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.
ಮುಂದಿನ ವರ್ಷ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಕಮಲ ಅರಳಿಸಲು ಬಿಜೆಪಿ ತಯಾರಿ ಮಾಡಿಕೊಳ್ಳುತ್ತಿದ್ದು, ಈಗಾಗಲೇ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ, ನಟಿ ಖುಷ್ಬೂ ಸುಂದರ್ ಸೇರಿದಂತೆ ಹಲವು ಪ್ರಮುಖರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈಗ ಕಮಲ್‌ಹಾಸನ್ ಪಕ್ಷದ ಅರುಣಾಚಲಂ ಬಿಜೆಪಿಗೆ ಸೇರ್ಪಡೆಯಾಗಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.