ಕಮಲಾಪುರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಹೊಸಪೇಟೆ ಅ 29 : ಇಂದು ನಡೆದ ತಾಲೂಕಿನ ಕಮಲಾಪುರದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೈಯದ್ ಅಮಾನುಲ್ಲಾ ಅಧ್ಯಕ್ಷರಾಗಿ ಹಾಗೂ ಬೋರಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಅ.20ರಂದು ಚುನಾವಣೆ ನಿಗದಿಯಾಗಿತ್ತು. ಬೆಂಗಳೂರು ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿ ನಂತರ ಅ.29ರಂದು ಚುನಾವಣೆಗೆ ಅನುಮತಿ ನೀಡಲಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ. ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಮೂಲಕ ಸೈಯದ್ ಅಮಾನುಲ್ಲಾ ಹಾಗೂ ಬೋರಮ್ಮ ಅವರ ಆಯ್ಕೆಯನ್ನು ಹೊಸಪೇಟೆ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಯಾದ ಹೆಚ್.ವಿಶ್ವನಾಥ್ ಅವರು ಪ್ರಕಟಿಸಿದರು.
ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ 14 ಕಾಂಗ್ರೆಸ್ ಹಾಗೂ 5 ಬಿಜೆಪಿ ಸದಸ್ಯರ ಬಲವಿದೆ.