ಕಮಲದ ಹೂವಿನ ಉಪಯೋಗಗಳು

ಮುಂಜಾನೆ ಸೂರ್‍ಯನ ರಶ್ಮಿಯನ್ನು ಕಂಡು ಅರಳುವ ಈ ಹೂವು, ಸಂಜೆ ಸೂರ್ಯಾಸ್ತದ ವೇಳೆಗೆ ಮುದುಡಿ ಹೋಗುತ್ತದೆ. ದೇವಾನುದೇವತೆಗಳಿಗೆ ಪ್ರಿಯವಾದ ಈ ಹೂವು, ಮಹಾಲಕ್ಷ್ಮಿ ಪೂಜೆಗೆ ಬೇಕೇಬೇಕು. ಕಮಲದ ಹೂವಿಗೆಪದ್ಮ, ಪಂಕಜ, ಸರೋಜ, ಶತಪತ್ರ, ಸಹಸ್ರಪತ್ರ ಎಂಬ ಅನ್ವರ್ಥ ನಾಮಗಳಿಂದ ಶೋಭಿಸಿ ನಾನಾ ಹೆಸರುಗಳಿಂದ ಕೂಡಿದೆ. ಇದು ೨ ಬಣ್ಣದಲ್ಲಿ ವಿಶೇಷವಾಗಿ ಕಾಣಸಿಗುತ್ತದೆ. ಒಂದು ಶ್ವೇತ ಕಮಲ ಇನ್ನೊಂದು ಕೆಂಪು ಕಮಲ ಲಭ್ಯವಿದೆ.
ಇದರ ಹೂ, ಎಲೆ, ಬೇರು, ಗೆಡ್ಡೆ, ಕೇಸರ ಬೀಜ ಉಪಯುಕ್ತವಾಗಿದೆ.

ಇದರಲ್ಲಿ ಪ್ರೋಟೀನ್, ಕೊಬ್ಬಿನಂಶ, ಶರ್ಕರ, ಸುಣ್ಣ, ಜೀವಸತ್ವಗಳಾದ ಥಯಾಮಿನ್ ರೈಬೋಪ್ಲೆವಿನ್, ನಿಯಾಸಿನ್ ಇತ್ಯಾದಿ ಪೋಷಕಾಂಶಗಳು ಇವೆ.

೧. ಕಮಲದ ಹೂವಿನ ತೈಲ: ಇದನ್ನು ಬಳಸಿ ಸ್ನಾನ ಮಾಡಿದರೆ ಮನಸ್ಸಿನ ಖಾಯಿಲೆಗಳು ನಮ್ಮತ್ತ ಸುಳಿಯುವುದಿಲ್ಲ.
೨. ಕಣ್ಣು ಕೆಂಪಾದಾಗ: ಕಮಲದ ಹೂವಿನ ಎಸಳುಗಳನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಕಣ್ಣು ತೊಳೆಯುತ್ತಾ ಬಂದರೆ ಕಣ್ಣು ಕೆಂಪಾಗಿರುವುದು ಕಡಿಮೆ ಆಗುತ್ತದೆ.
೩. ಮುಖದ ಕಾಂತಿಗೆ: ನೀರಿಗೆ ಕಮಲದ ಹೂವಿನ ತೈಲದ ೨ ಹನಿ ಹಾಕಿ ಅಥವಾ ಕೆಲವು ದಳಗಳನ್ನು ಹಾಕಿ ಆ ನೀರಿನಿಂದ ಆವಿಯನ್ನು ತೆಗೆದುಕೊಂಡರೆ ಮುಖದ ಕಾಂತಿ ಉತ್ತಮವಾಗುತ್ತದೆ.
೪. ತಲೆನೋವು: ಪಿತ್ತಾಧಿಕ್ಯದಿಂದ ಬರುವ ತಲೆನೋವಿಗೆ ಕಮಲದ ಹೂವಿನ ದಳಗಳನ್ನು ನೀರಿನಲ್ಲಿ ಅರೆದು ಹಣೆಗೆ ಪಟ್ಟು ಹಾಕುವುದರಿಂದ ಕಡಿಮೆ ಆಗುತ್ತದೆ.
೫. ಅಧಿಕ ರಕ್ತಸ್ರಾವಕ್ಕೆ: ಮುಟ್ಟಿನ ಸಮಯದಲ್ಲಿ ಬರುವ ಅಧಿಕ ರಕ್ತಸ್ರಾವಕ್ಕೆ ಕಮಲದ ಹೂವಿನ ಜೊತೆ ದ್ರಾಕ್ಷಿ, ಜೇನುತುಪ್ಪ, ಸಕ್ಕರೆ, ಅಕ್ಕಿ ತೊಳೆದನೀರು ಎಲ್ಲಾ ಸೇರಿಸಿ ಕುಡಿಯಬೇಕು.
೬. ಮೂಲವ್ಯಾಧಿಗೆ: ಕಮಲದ ಹೂವಿನ ಮಧ್ಯಭಾಗದಲ್ಲಿ ಇರುವ ಕೇಸರಗಳನ್ನು ಸಂಗ್ರಹಿಸಿ ನುಣ್ಣಗೆ ಅರೆದು ಬೆಣ್ಣೆಯಲ್ಲಿ ಬೆರೆಸಿ ತಿನ್ನುತ್ತಾ ಬಂದರೆ ಮೂಲವ್ಯಾಧಿ ಗುಣವಾಗುತ್ತದೆ.
೭. ಕೆಮ್ಮಿಗೆ: ತಾವರೆಯ ಬೇರನ್ನು ಪುಡಿಮಾಡಿ ಜೇನುತುಪ್ಪದ ಜೊತೆ ಸೇರಿಸಿ, ಸೇವಿಸುತ್ತಾ ಬಂದರೆ ಕೆಮ್ಮು ಕಡಿಮೆಯಾಗುತ್ತದೆ.
೮. ಹೃದಯ ದೌರ್ಬಲ್ಯಕ್ಕೆ: ಕಮಲದ ಎಸಳಿನ ಚೂರ್ಣವನ್ನು ನೀರಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಇಂಗಿಸಿ, ಅರ್ಧ ಇಂಗಿದ ಮೇಲೆ ಶೋಧಿಸಿ ಪ್ರತಿನಿತ್ಯ ೬೦ ದಿನಗಳ ಕಾಲ ಸೇವನೆ ಮಾಡುತ್ತಾ ಬಂದರೆ ಹೃದಯದ ದೌರ್ಬಲ್ಯ ಕಡಿಮೆ ಆಗುತ್ತದೆ.