‘ಕಮಲ’ಕ್ಕೆ ಒಲಿದ ಕಂಪ್ಲಿ ಪುರಸಭೆ ಗದ್ದುಗೆ

ಕಂಪ್ಲಿ ನ07 : ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ ಜರುಗಿದ ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ 13 ಸದಸ್ಯರ ಬೆಂಬಲ ಪಡೆದ ಹಿನ್ನೆಲೆ ವಿ.ಶಾಂತಲಾ ವಿದ್ಯಾಧರ್ ಅಧ್ಯಕ್ಷರಾಗಿ, ನಿರ್ಮಲ ವಸಂತ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಸಾಮಾನ್ಯ-ಮಹಿಳೆ ಮೀಸಲಾತಿಯಡಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿ.ಶಾಂತಲಾ ವಿದ್ಯಾಧರ್, ಕಾಂಗ್ರೆಸ್‍ನ ಸುಶೀಲ, ಹಿಂದುಳಿದ ವರ್ಗ ಅ ಮೀಸಲಾತಿಯಡಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಿರ್ಮಲಾ ವಸಂತ್, ಕಾಂಗ್ರೆಸ್‍ನ ಎಂ.ಉಸ್ಮಾನ್ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಬಹುಮತ ಪಡೆದ ಬಿಜೆಪಿ ಅಭ್ಯರ್ಥಿಗಳು ವಿಜೇತರಾಗಿದ್ದು, ಕಂಪ್ಲಿ ಪುರಸಭೆ ಅಧಿಕಾರ ಗದ್ದುಗೆ ಬಿಜೆಪಿಗೆ ಒಲಿದಿದೆ. ತಹಸೀಲ್ದಾರ್ ಗೌಸಿಯಾಬೇಗಂ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆಯ ನೂತನ ಅಧ್ಯಕ್ಷೆ ವಿ.ಶಾಂತಲಾ ವಿದ್ಯಾಧರ ಹಾಗೂ ಉಪಾಧ್ಯಕ್ಷೆ ನಿರ್ಮಲಾ ವಸಂತ ಅವರನ್ನು ಬಿಜೆಪಿ ಸದಸ್ಯರು, ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿ ಸಂಭ್ರಮಿಸಿದರು.
ಸಂಭ್ರಮಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು, ಕಂಪ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ. ಈ ಸಂಗತಿ ಅರಿತ ಕಂಪ್ಲಿ ಜನತೆ ಪುರಸಭೆ ಗದ್ದುಗೆ ಬಿಜೆಪಿಗೆ ಒಲಿಯುವಂತೆ ಆಶೀರ್ವದಿಸಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ವೀರಶೈವ ಸಮುದಾಯಕ್ಕೆ ಪುರಸಭೆ ಅಧ್ಯಕ್ಷ ಸ್ಥಾನಮಾನ ಸಿಗದ ಹಿನ್ನೆಲೆ ಈ ಬಾರಿ ಸಾಮಾಜಿಕ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯೆ ವಿ.ಶಾಂತಲಾ ವಿದ್ಯಾಧರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇನ್ನು ನನ್ನ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಗೊಂಡಿದ್ದ ಅನುದಾನಗಳಲ್ಲೇ ಹಾಲಿ ಶಾಸಕ ಜೆ.ಎನ್.ಗಣೇಶ್ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ನಗರೋತ್ಥಾನ ಯೋಜನೆಯ ಅನುದಾನದ ಸೋಮಪ್ಪ ಕೆರೆ, ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಶಾಸಕರಾಗಿ ಎರಡು ವರ್ಷಗಳಾದರೂ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನೇ ತಂದಿಲ್ಲ. ಕ್ಷೇತ್ರದ ಅಭಿವೃದ್ಧಿ ಕುರಿತಂತೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ್, ಉಪ ತಹಸೀಲ್ದಾರ್ ಬಿ.ರವೀಂದ್ರ ಕುಮಾರ್, ಬಿಜೆಪಿಯ ವಿ.ಎಲ್.ಬಾಬು, ಟಿ.ವಿ.ಸುದರ್ಶನ್ ರೆಡ್ಡಿ, ಪಾರ್ವತಿ,ಎಸ್.ಎಂ.ನಾಗರಾಜ್, ಸಿ.ಆರ್.ಹನುಮಂತಪ್ಪ, ಗಂಗಮ್ಮ ಉಡೇಗೋಳ್, ಎನ್.ರಾಮಾಂಜನೇಯಲು, ಎಚ್.ಹೇಮಾವತಿ, ಆರ್.ಆಂಜನೇಯ, ರಮೇಶ್ ಹೂಗಾರ್, ಕಾಂಗ್ರೆಸ್‍ನ ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‍ಭಾಷ, ನಾಗಮ್ಮ, ಗುಡದಮ್ಮ, ಮಾಲ, ಜಿ.ಸುಮಾ, ಎಂ.ಹೊನ್ನೂರ್ ವಲಿ, ವೀರಾಂಜನೇಯಲು ಸೇರಿ ಕಾರ್ಯಕರ್ತರನೇಕರಿದ್ದರು.