ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ಬೆಂಗಳೂರು,ನ.೨೨- ಕಬ್ಬಿನ ಎಫ್‌ಆರ್‌ಪಿ ದರ ಏರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ರಾಜ್ಯದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಗೂರು ಶಾಂತಕುಮಾರ್ ನೇತೃತ್ವದಲ್ಲಿ ಈ ಅಹೋರಾತ್ರಿ ಧರಣಿ ನಡೆದಿದ್ದು, ಕಬ್ಬಿನ ಎಫ್‌ಆರ್‌ಪಿ ಬೆಲೆಯನ್ನು ಟನ್‌ಗೆ ಕನಿಷ್ಟ ೩,೫೦೦ ರೂ. ನಿಗದಿ ಮಾಡುವಂತೆ ಧರಣಿನಿರತ ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ.
ಕಬ್ಬು ಬೆಳೆಗಾರರು ಮುಖ್ಯಮಂತ್ರಿಗಳ ಗೃಹ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದೆವು. ಆದರೆ, ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಮುಖ್ಯಮಂತ್ರಿಗಳ ಕಚೇರಿ ಬಳಿ ಬದಲು ಸ್ವತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೇವೆ ಎಂದು ಕುರುಗೂರು ಶಾಂತಕುಮಾರ್ ಹೇಳಿದರು.
ಕಬ್ಬು ಬೆಳೆಗಾರರ ಬೇಡಿಕೆ ಈಡೇರುವವರೆಗೂ ಧರಣಿ ನಿಲ್ಲಿಸುವುದಿಲ್ಲ. ಪ್ರತಿದಿನ ಒಂದೊಂದು ಜಿಲ್ಲೆಯ ಕಬ್ಬು ಬೆಳೆಗಾರರು ಧರಣಿಯಲ್ಲಿ ಪಾಲ್ಗೊಳ್ಳುವರು ಎಂದರು.
ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು. ಎಫ್‌ಆರ್‌ಪಿ ದರವನ್ನು ಏರಿಸಲೇಬೇಕು ಎಂದು ಅವರು ಒತ್ತಾಯಿಸಿದರು.