ಕಬ್ಬು ಇಳುವರಿ ಕಟಾವು ಮತ್ತು ಸಾಗಾಣಿಕೆ ದರ ಹೆಚ್ಚಳಕ್ಕೆ ಅಧಿಕಾರಿಗಳಿಗೆ ಸೂಚನೆ:ಬಿ. ಫೌಜಿಯಾ ತರನ್ನಮ್

ಕಲಬುರಗಿ: ಸೆ.04:ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಇಳುವರಿ ಬಗ್ಗೆ, ಕಟಾವು ಮತ್ತು ಸಾಗಾಣಿಕೆ ದರ ಹೆಚ್ಚಾಗಿ ಕಡಿತಗೊಳಿಸುತ್ತಿರುವ ಬಗ್ಗೆ, ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ದೂರಿನ ಬಗ್ಗೆ, ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರಣದ ಬಗ್ಗೆ & ಸಕಾಲಿಕ ಕಬ್ಬು ಕಟಾವಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು & ಸೂಚನೆಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್ ಸೂಚಿಸಿದರು.
ಅವರು ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಫಜಲಪೂರ ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆ ಹಾವಳಗಾ ಹಾಗೂ ಕೆ.ಪಿ.ಆರ್. ಸಕ್ಕರೆ ಕರ್ಖಾನೆ ಚಿಣಮಗೇರಾ ಕರೆಯಲಾದ ಸಭೆಯಲ್ಲಿ ಮಾತನಾಡಿದರು.
ಬೇರೆ ಬೇರೆ ರೀತಿಯ ಇಳುವರಿ ಪ್ರಮಾಣ ನಿಗಧಿಪಡಿಸುತ್ತಿರುವ ಬಗ್ಗೆ ಕಬ್ಬು ಬೆಳೆಗಾರರು ಆಕ್ಷೇಪಣೆ ವ್ಯಕ್ತ ಪಡಿಸಿದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸುತ್ತಾ ಕಬ್ಬು ಇಳುವರಿ ಪ್ರಮಾಣ ನಿಗಧಿಪಡಿಸಲು ಇರುವ ಜಿಲ್ಲಾ ಮಟ್ಟದ ಜಿಲ್ಲಾ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ದೂರಿನ ಬಗ್ಗೆ ಕಬ್ಬು ಬೆಳೆಗಾರರ ಸಂಘ ಪ್ರತಿನಿಧಿಗಳು ಮಾತನಾಡಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡಲು ಉಪಯೋಗಿಸುತ್ತಿರುವ ವೇ-ಬ್ರಿಡ್ಜ್ ನಲ್ಲಿ ದೋಷಗಳಿದ್ದು, ಇದರಿಂದ ಕಬ್ಬಿನ ತೂಕದಲ್ಲಿ ರೈತರಿಗೆ ಮೋಸವಾಗುತ್ತಿರುವ ವಿಷಯವನ್ನು ಸಭೆಯ ಗಮನಕ್ಕೆ ತಂದಾಗ ಸಕ್ಕರೆ ಕಾರ್ಖಾನೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ರೈತರ ತೂಕದ ಯಂತ್ರಗಳನ್ನು ಪರೀಕ್ಷಿಸಿ ಅವುಗಳನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸೂಚಿಸುತ್ತಾ ಕನಿಷ್ಠ 5 ಜನ ರೈತ ಪ್ರತಿನಿಧಿಗಳನ್ನು ತೂಕದ ಪರಿಶೀಲನೆಗಾಗಿ ಕಾರ್ಖಾನೆಗಳ ಒಳಗೆ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಿ ಅವರಿಗೆ ಗುರುತಿನ ಚೀಟಿಗಳನ್ನು ನೀಡಿ ಅವರೊಂದಿಗೆ ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ, ಕಲಬುರಗಿ ರವರು ತಪಾಸಣೆ ಕೈಗೊಳ್ಳಲು ಸೂಚಿಸಿದರು .
ಮಾಲಿನ್ಯ ನಿಯಂತ್ರಣದ ಬಗ್ಗೆ ಅಫಜಲಪುರ ತಾಲ್ಲೂಕಿನ ಸಕ್ಕರೆ ಕಾರ್ಖಾನೆಗಳಿಂದ ಕಲುಷಿತ ನೀರನ್ನು ಭೀಮಾ ನದಿಗೆ ಬಿಡುತ್ತಿರುವ ಕಾರಣ ನದಿ ನೀರು ಕಲುಷಿತಗೊಂಡು ಬೆಳೆಗಳಿಗೆ ಹಾನಿ ಹಾಗೂ ಸಾರ್ವಜನಿಕರು ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನಲ್ಲಿ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಹಾಗೂ ಸಕ್ಕರೆ ಕಾರ್ಖಾನೆಗಳು ಬಿಡುತ್ತಿರುವ ಹೊಗೆಯಿಂದ ಹತ್ತಿ ಹಾಗೂ ಕಬ್ಬು ಬೆಳೆಗಳಿಗೆ ಹಾನಿಯಾಗುತ್ತಿದ್ದು ಇದನ್ನು ತಡೆಗಟ್ಟಲು ರೈತ ಪ್ರತಿನಿಧಿಗಳು ಸಭೆಯ ಗಮನಕ್ಕೆ ತಂದಾಗ ಪರಿಸರ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಲಬುರಗಿ ರವರು ವಾರಕ್ಕೊಮ್ಮೆ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು.
ಕಬ್ಬು ಕಟಾವಿನ ದಿನಾಂಕದ ಬಗ್ಗೆ ರೈತರಿಗೆ ಗೊಂದಲವಿರುವ ಕಾರಣ ಜೇಷ್ಠತೆಯ ಆಧಾರದ ಮೇಲೆ ದಿನಾಂಕವಾರು ಈ ಬಗ್ಗೆ ವೇಳಾಪಟ್ಟಿ ತಯಾರಿಸಿ ಮುಂಚಿತವಾಗಿ ರೈತರ ಗಮನಕ್ಕೆ ತಂದು ನಿಗಧಿಪಡಿಸಿದ ವೇಳಾಪಟ್ಟಿಯಂತೆ ಸಕಾಲಿಕವಾಗಿ ಕಬ್ಬು ಕಟಾವು ಕಾರ್ಯವನ್ನು ನಿರ್ವಹಿಸುವ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರದ ಸೂಚನಾ ಫಲಕದಲ್ಲಿ ಸದರಿ ವೇಳಾಪಟ್ಟಿಯನ್ನು ಪ್ರದರ್ಶಿಸಲು ಸಕ್ಕರೆ ಕಾರ್ಖಾನೆಯವರಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಾಂತಗೌಡ ಜಿ ಗುಣಕಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸತೀಶ ಕುಮಾರ, ಸಹಾಯಕ ನಿಯಂತ್ರಕರು ಕಾನೂನು ಮಾಪನ ಇಲಾಖೆ ಶಿವಪುತ್ರಪ್ಪ ಅಲ್ಲಪೂರ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷರು ಬಸವರಾಜ ಗು. ಪಾಟೀಲ ಅಂಕಲಗಿ,ಜಿಲ್ಲಾ ಅಧ್ಯಕ್ಷರು ಕಬ್ಬು ಬೆಳಗಾರ ಸಂಘಧ ಜಗದೀಶ ಪಾಟೀಲ್ ರಾಜಪೂರ ಸೇರಿದಂತೆ ಕಲಬುರಗಿ. ರಮೇಶ್ ಹೂಗಾರ,ತಾಲೂಕ ಅಧ್ಯಕ್ಷ ಸಿದ್ರಾಮ ಹಿರೇಮಠ ಭಾಗವಹಿಸಿದ್ದರು.