ಕಬ್ಬಿನ ಹಣ ಪಾವತಿಸದಿದ್ದರೆ ಧರಣಿ

ಹುಮನಾಬಾದ:ಆ.1: ಕಬ್ಬಿನ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬೊಮ್ಮಾಯಿ, ಬಿಎಸ್ ಎಸ್‍ಕೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ್ ಮನೆ ಎದುರು ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸುವ ಕುರಿತು ಶನಿವಾರ ರೈತರು ಚರ್ಚೆ ನಡೆಸಿದರು.

ಹಳ್ಳಿಖೇಡ (ಬಿ) ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ರೈತ ಸಂಘದ ಪದಾಧಿ ಕಾರಿಗಳು ಕರೆದ ಸಭೆಯಲ್ಲಿ ಕಬ್ಬು ಪೂರೈಕೆ ಮಾಡಿದ ರೈತರು ಮಾತನಾಡಿ, ಕಾರ್ಖಾನೆಗೆ ನಂಬಿಕೊಂಡು ಕಬ್ಬು ಪೂರೈಸಿದ ರೈತರಿಂದು ಅನೇಕ ಸಂಕಷ್ಟಗಳು ಎದುರಿಸುವ ಸ್ಥಿತಿ ಬಂದಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸುವ ಭರವಸೆ ನೀಡಿದ ಆಡಳಿತ ಮಂಡಳಿ ಸುಳ್ಳು ನೆಪ ಹೇಳಿಕೊಂಡು ಕಾಲ ಕಳೆಯುತ್ತಿದೆ. ಕೂಡಲೇ ರೈತರ ಬಾಕಿ ಹಣ ಪಾವತಿಸಬೇಕು. ಇಲ್ಲವೇ ಕಬ್ಬು ಪೂರೈಸಿದ ಎಲ್ಲ ರೈತರು ಪ್ರತಿಭಟನೆ, ಧರಣಿ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ಸುಭಾಷ ಗಂಗಾ ಮಾತನಾಡಿ, ಕೂಲಿ ಆಳುಗಳಿಗೆ ಸಂಬಳ ನೀಡುವುದು ಕಷ್ಟವಾಗಿದೆ. ಕಬ್ಬು ಬೆಳೆಸುವುದು, ಕಾರ್ಖಾನೆಗೆ ಪೂರೈಸುವುದು ನಂತರ ಹಣ ಬರುವುದು ಕಷ್ಟವಾಗಿದೆ. ಕಬ್ಬು ಬೆಳೆಸುವರ ಸಂಕಷ್ಟಗಳು ಆಡಳಿತ ನಡೆಸುವರಿಗೆ ಗೊತ್ತಾಗುತ್ತಿಲ್ಲ. ಅಧಿಕಾರಕ್ಕೆ ತರುವುದು ಗೊತ್ತು, ಅಧಿಕಾರದಿಂದ ಇಳಿಸುವುದು ಗೊತ್ತು. ಈಗಾಗಲೇ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಸ್ಪಂದಿಸದಿದ್ದರೆ ಮುಂದಿನ ಯೋಜನೆಗಳನ್ನೂ ಹಾಕಿಕೊಂಡಿದ್ದೇವೆ ಎಂದರು.

ಬಳವಂತ ಪಾಟೀಲ ಮಾತನಾಡಿ, ಪದೇ ಪದೆ ಅಧ್ಯಕ್ಷರಿಗೆ ಹಣ ಪಾವತಿ ಕುರಿತು ಕರೆ ಮಾಡುತ್ತಿದ್ದು, ಸುಳ್ಳು ನೆಪ ಹೇಳಿ ಕಾಲ ಕಳೆಯುತ್ತಿದ್ದಾರೆ. ರೈತರ ಕಷ್ಟ ಅವರಿಗೆ ಅರ್ಥವಾಗುವುದಲ್ಲ. ಅವರನ್ನು ಮನೆಯಲ್ಲಿ ಕೂಡಿ ಹಾಕಿ ಧರಣಿ ಮಾಡಬೇಕು ಎಂದರು.

ಸಂತೋಷ ಹುಣಸಗೇರಾ ಮಾತನಾಡಿ, ಕಬ್ಬಿನ ಹಣ ಬರುವ ನಿಟ್ಟಿನಲ್ಲಿ ಸಾಲ ಮಾಡಿದ್ದು, ಸಾಲಗಾರರು ತೊಂದರೆ ಕೊಡುತ್ತಿದ್ದಾರೆ. ರೈತರ ಹೋರಾಟಕ್ಕೆ ನಾನೂ ಸಹಮತ ನೀಡುತ್ತೇನೆ ಎಂದರು.

ಸುಭಾಷ್ ಮುತ್ತಂಗಿ ಮಾತನಾಡಿ, ಕಬ್ಬಿನ ಹಣ ಬಾಕಿ ಉಳಿದರೆ ಮನೆ-ಹೊಲ ಮಾರಿ ಪಾವತಿ ಮಾಡುತ್ತೇನೆ ಎಂದು ಹೇಳಿದ ಕಾರ್ಖಾನೆ ಅಧ್ಯಕ್ಷರು ಇದೀಗ ತಮ್ಮ ಹೊಲ-ಮನೆ ಮಾರಿ ರೈತರ ನೆರವಿಗೆ ಧಾವಿಸಬೇಕು. ರೈತರ ಬಾಕಿ ಹಣ ಪಾವತಿಸಿ ನುಡಿದಂತೆ ನಡೆಯಬೇಕು ಎಂದರು.

ರೈತ ಸಂಘದ ಮುಖಂಡರಾದ ಸಿದ್ರಾಮಪ್ಪ ಅಣದೂರೆ, ಸತೀಶ್ ನನ್ನೂರೆ, ಚಂದ್ರಶೇಖರ ಜಮಖಂಡಿ ಮಾತನಾಡಿ, ವಾರ ಕಾಲ ಕಾದು ನೋಡಿ. ಇನ್ನೊಂದು ಬಾರಿ ಮುಖ್ಯಮಂತ್ರಿ ಭೇಟಿ ಮಾಡಿ ಮನವರಿಕೆ ಮಾಡೋಣ. ನಿಗದಿತ ಅವ ಧಿಯಲ್ಲಿ ಹಣ ಪಾವತಿಸದಿದ್ದರೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸದೆದರು ಧರಣಿ ನಡೆಸೋಣ ಎಂದರು. ಇದಕ್ಕೆ ಎಲ್ಲ ರೈತರು ಒಪ್ಪಿಗೆ ಸೂಚಿಸಿದರು.