ಕಬ್ಬಿನ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಸ್ತೆ ತಡೆ

ಕಲಬುರಗಿ. ನ. 02: ಕಬ್ಬಿನ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೋಮವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಸ್ತೆ ತಡೆ ಚಳುವಳಿ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವುದಕ್ಕಿಂತ ಮುನ್ನವೇ ಕಬ್ಬಿನ ಬೆಂಬಲ ಬೆಲೆಯನ್ನು ಪ್ರತಿ ಟನ್‍ಗೆ 2800ರೂ.ಗಳನ್ನು ನಿಗದಿಗೊಳಿಸಬೇಕು. ಎಕ್ಸ್‍ಫೀಲ್ಡ್ ದರವನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದರೂ ಸಹ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಪರಿಹಾರ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರವು ಘೋಷಿಸಿದ ತೋಟಗಾರಿಕೆ ಬೆಳೆ ಹಾನಿಗಳ ಪರಿಹಾರ ಇನ್ನೂ ಸಹ ಸಂತ್ರಸ್ತ ರೈತರಿಗೆ ತಲುಪಿಲ್ಲ. ಕೂಡಲೇ ಪರಿಹಾರವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ರಾಜಾಪೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ಸಾಹು ಭೂಸನೂರ್, ದತ್ತಾತ್ರೇಯ್ ಕುಲಕರ್ಣಿ, ರಮೇಶ್ ಹೂಗಾರ್, ನಾಗೇಂದ್ರ ದೇಶಮುಖ್, ಶರಣಕುಮಾರ್ ಬಿಲ್ಲಾಡ್ ಮುಂತಾದವರು ಪಾಲ್ಗೊಂಡಿದ್ದರು.