ಕಬ್ಬಿನ ಗದ್ದೆಗಳ ಬೆಂಕಿ ಅವಘಡಕ್ಕೆ ಯಾರು ಹೊಣೆ?

ವರದಿ:- ತಲಕಾಡು ಮಹದೇವ.
ತಿ.ನರಸೀಪುರ: ಮಾ.25:- ತಾಲೂಕಿನಾದ್ಯಂತ ಸುಮಾರು ನೂರಾರು ಎಕರೆ ಕಬ್ಬಿನ ಗದ್ದೆಗಳು ಬೆಂಕಿಗೆ ಆಹುತಿಯಾಗಿವೆ.ವಿದ್ಯುತ್ ಅವಘಡ, ಬೇಸಿಗೆ ಬಿಸಿಲಿಗೆ ಬೆಂಕಿ ಉತ್ಪತ್ತಿಗೊಂಡು ಕಬ್ಬಿನ ಗದ್ದೆಗಳ ಆಕಸ್ಮಿಕ ಬೆಂಕಿ ಅವಘಡಕ್ಕೆ ಕಾರಣವಾಗಿದ್ದು, ಬೆಂಕಿ ಅವಘಡದಿಂದ ಕಬ್ಬು ಬೆಳೆಗಾರರು ಹೆಚ್ಚು ನಷ್ಟ ಹೊಂದುತ್ತಿದ್ದು,ಈ ಆಕಸ್ಮಿಕ ನಷ್ಟಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಕಾಡತೊಡಗಿದೆ.
ತಾಲೂಕಿನಾದ್ಯಂತ 10000 ಸಾವಿರ ಎಕರೆಗೂ ಹೆಚ್ಚು ಜಮೀನಿನಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದು,ಈ ಪೈಕಿ ನೂರಾರು ಎಕರೆ ಕಬ್ಬಿನ ಗದ್ದೆಗಳು ಬೆಂಕಿಗೆ ಆಹುತಿಯಾಗಿವೆ. ತಲಕಾಡು, ಮೂಗೂರು ,ಹ್ಯಾಕನೂರು, ವಾಟಾಳು, ತುಂಬಲ, ಮಾರಗೌಡನಪುರ ,ಬನ್ನೂರು, ಕರೋಹಟ್ಟಿ ಗ್ರಾಮಗಳಲ್ಲಿ ಕಬ್ಬಿನ ಗದ್ದೆಗಳು ಬೆಂಕಿ ಬಿದ್ದು ಸುಟ್ಟುಹೋದ ಘಟನೆಗಳು ವರದಿಯಾಗಿದ್ದು, ಸಂಬಂಧಿಸಿದ ಕೃಷಿ ಇಲಾಖೆ, ಚೆಸ್ಕಾಂ ಮತ್ತು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿವೆ.ಸಂತ್ರಸ್ತ ಕಬ್ಬಿನ ಗದ್ದೆಯ ಮಾಲೀಕರಿಗೆ ಪರಿಹಾರ ನೀಡಲು ತುರ್ತುಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪವಿದೆ.
ಚೆಸ್ಕಾಂ ನಿರ್ಲಕ್ಷ್ಯ:
ಬೇಸಿಗೆ ಬಿಸಿಲಿಗೆ ಕಬ್ಬಿನ ಗದ್ದೆಗಳಲ್ಲಿಯೇ ಶಾಖೋತ್ಪನ್ನಗೊಂಡು ಬೆಂಕಿ ಅವಘಡ ಸಂಭವಿಸಿದರೆ,ಬಹುತೇಕ ಎಲ್ಲ ಕಡೆ ಕಬ್ಬಿನ ಗದ್ದೆಗಳ ಮೇಲೆ ಹಾದು ಹೋಗಿರುವ ಜೋತು ಬಿದ್ದ ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶಗೊಂಡು ಬೆಂಕಿ ಉತ್ಪತ್ತಿಯಾಗಿ ಕಬ್ಬಿನ ಗದ್ದೆಗಳು ಸಂಪೂರ್ಣ ಭಸ್ಮಗೊಂಡಿವೆ. ಕಬ್ಬಿನ ಗದ್ದೆಗಳ ಮೇಲೆ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾಗ್ಯೂ ಇಲಾಖೆಯು ಸಮಸ್ಯೆಯನ್ನು ಸರಿಪಡಿಸದೆ ಇರುವುದು ಕಬ್ಬಿನ ಗದ್ದೆಗಳ ಬೆಂಕಿ ಅವಘಡಕ್ಕೆ ಪ್ರಮುಖ ಕಾರಣ.ರೈತರು ಖುದ್ದು ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಕಬ್ಬು ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಿದೆ.
ಕಟಾವು ವಿಳಂಬ ಕಾರಣ:
ಈ ಭಾಗದ ಕಬ್ಬನ್ನು ಕಟಾವು ಗುತ್ತಿಗೆಯನ್ನು ಸ್ಥಳೀಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮತ್ತು ಕುಂತೂರಿನ ಸಕ್ಕರೆ ಕಾರ್ಖಾನೆಗಳಿಗೆ ವಹಿಸಲಾಗಿದೆ.
ಕಬ್ಬನ್ನು 12-14 ತಿಂಗಳ ಒಳಗೆ ಕಬ್ಬು ಕಟಾವು ಮಾಡುವುದು ವಾಡಿಕೆ.ಆದರೆ,ಈ ಬಾರಿ 20 ತಿಂಗಳ ಕಳೆದರೂ ಕಬ್ಬು ಕಟಾವು ಆಗದೆ ಬೆಂಕಿಯ ದುರ್ಘಟನೆಗಳಿಗೆ ಕಾರಣವಾಗಿದೆ.ಕಾರ್ಖಾನೆಗಳು ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಲು ಜಿಲ್ಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡದ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಬೇಕಾಬಿಟ್ಟಿ ಕಬ್ಬು ಕಟಾವು ಮಾಡುತ್ತಿವೆ. ವಿಳಂಬದ ಅವಧಿಯಲ್ಲಿ ರೈತರ ಕಬ್ಬು ಹೆಚ್ಚು ಒಣಗುವುದರಿಂದ ತೂಕದಲ್ಲೂ ರೈತರಿಗೆ ನಷ್ಟ ಆಗಲಿದೆ.ಈ ನಡುವೆ ಕಬ್ಬು ಬೆಂಕಿಗಾಹುತಿಯಾದರೂ ರೈತರಿಗೆ ಬಲು ನಷ್ಟ.
ರೈತರು ರಸಗೊಬ್ಬರ, ಔಷಧಿಗಳ ಬೆಲೆಯೇರಿಕೆ ಮತ್ತು ಹವಾಮಾನ ವೈಫರೀತ್ಯದಿಂದ ತತ್ತರಿಸಿ ಹೋಗಿದ್ದು, ಸರ್ಕಾರ ಕೂಡ ಕಬ್ಬಿನ ಖರೀದಿಗೆ ಸಮರ್ಪಕ ಬೆಲೆ ನಿಗದಿ ಮಾಡದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.