ಕಬ್ಬಿನ ಎಫ್.ಆರ್.ಪಿ ದರ ವಿರೋಧಿಸಿ ರೈತ ಸಂಘದಿಂದ ಖಂಡನೆ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.1: ಕಬ್ಬಿನ ಎಫ್.ಆರ್.ಪಿ ಕ್ವಿಂಟಾಲಗೆ 10 ರೂ ಹೆಚ್ಚು ಮಾಡಿರುವ ಕೇಂದ್ರ ಸರಕಾರ ರೈತರನ್ನು ಮತ್ತೆ ನÀಷ್ಟ ಅನುಭವಿಸುವಂತೆ ಮಾಡಿರುವುದರ ವಿರುದ್ಧ ಹಾಗೂ ಒಂದು ಕ್ವಿಂಟಾಲ ಕಬ್ಬಿಗೆ ಎಫ್.ಆರ್.ಪಿ ಸೇರಿದಂತೆ 5000 ರೂ ಘೋಷಣೆ ಮಾಡಬೇಕೆಂದು ರೈತ ಸಂಘದಿಂದ ಆಗ್ರಹ ಮಾಡುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಹಾಗೂ ಕೋಲ್ಹಾರ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ ಮಾತನಾಡಿದರು.
ಕೇಂದ್ರ ಸರಕಾರ ನಿನ್ನೆ ಪ್ರತಿ ಟನ್ ಕಬ್ಬಿಗೆ 100 ರೂ ಎಫ್.ಆರ್.ಪಿ. ಘೋಷಣೆಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಅಪರ್ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಬ್ಬಿನ ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ, ಕಾರ್ಮಿಕರ ಕೂಲಿ, ಕಟಾವು ವೆಚ್ಚ, ಸಾಗಾಣೆ ವೆಚ್ಚ, ಕೀಟನಾಶಕ ಹಾಗೂ ರಸಗೊಬ್ಬರದ ದರ ಏರಿಕೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಹೊತ್ತುಕೊಂಡು ದೀರ್ಘಾವದಿ ಅವಧಿಯಲ್ಲಿ ಬೆಳೆದ ಕಬ್ಬಿಗೆ ವೈಜ್ಞಾನಿಕವಾಗಿ ಲೆಕ್ಕ ಹಾಕಿ ಒಂದು ಟನ್ ಕಬ್ಬಿಗೆ 5000 ರೂ ಎಫ್.ಆರ್.ಪಿ ಬೆಲೆ ನಿಗದಿ ಪಡಿಸಬೇಕು ಎಂಬುದು ನಮ್ಮೆಲ್ಲ ರೈತರ ಬಹುದಿನಗಳ ಹೋರಾಟವಾಗಿತ್ತು, ಆದರೆ ಒಂದು ಟನ್ ಕಬ್ಬಿಗೆ 100 ಹೆಚ್ಚು ಮಾಡಿ 3150 ಬೆಲೆ ಎಫ್.ಆರ್.ಪಿ ಘೋಷಣೆ ಮಾಡಿರುವ ಕೇಂದ್ರ ಸರಕಾರ ಮತ್ತೊಮ್ಮೆ ರೈತ ವಿರೋಧಿ ಸರಕಾರ ಎಂದು ಸಾಭಿತುಪಡಿಸಿದೆ.
ಕಬ್ಬಿನಿಂದ ಸಕ್ಕರೆ, ಪ್ರೆಸ್ ಮಡ್, ಬಯೋ ಫರ್ಟಿಲೈಜರ್, ಮೊಲಾಸಸ್, ಅಲ್ಕೋಹಾಲ್, ಬಗಾಸ್, ಸ್ಟೀಮ್, ವಿದ್ಯುತ್ ಸೇರಿದಂತೆ ಅನೇಕ ರೀತಿಯ ಲಾಭಗಳನ್ನು ಪಡೆಯುತ್ತಿರುವ ಸಕ್ಕರೆ ಕಾರ್ಖಾನೆ ಮಾಲಿಕರು ಸೇರಿದಂತೆ ಸರಕಾರ ವಿವಿಧ ಲಾಭ ಪಡೆಯುತ್ತಿದ್ದು, ಅದರಲ್ಲಿ ಒಂದಿಷ್ಟು ರೈತರಿಗೆ ಪಾಲು ಕೊಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ
ಈ ಮೊದಲೆ 650 ಇದ್ದ ಕಟಾವು ವೆಚ್ಚ, ಸಾಗಾಣೆ ವೆಚ್ಚ, ಸೇರಿದಂತೆ ಪ್ರತಿ ಟನ್‍ಗೆ 100 ಜಾಸ್ತಿ ಮಾಡುತ್ತೆವೆಂದು ಕಬ್ಬಿನ ಗ್ಯಾಂಗ್ ಕೂಲಿಕಾರ್ಮಿಕರ ಸಂಘ ಈಗಾಗಲೇ ನೀರ್ಣಯಿದ್ದಾರೆ ಅಂದರೆ ಪ್ರತಿ ಟನ್ ಕಬ್ಬಿಗೆ ಸುಮಾರು 750 ಖರ್ಚಾವುದು. ಇದು ಕೂಡಾ ಸಂಪೂರ್ಣ ರೈತರ ಮೇಲೆ ಹೊರೆ ಬೀಳುವಂತಾಗಿದೆ, ಕಾರ್ಖಾನೆ ಮಾಲಿಕರು ಇದನ್ನು ಸಹ ರೈತರ ಮೇಲೆ ಹಾಕುವರು. ಕೇಂದ್ರ ಸರ್ಕಾರ 3150 ಘೋಷಣಿ ಮಾಡಿರುವುದರಲ್ಲಿ 750 ವೆಚ್ಚ ತೆಗೆದರೆ 2400 ರೂ ಪ್ರತಿ ಟನ್ ಕಬ್ಬಿಗೆ ಉಳಿದಂತಾಗುತ್ತದೆ. ಆದ್ದರಿಂದ ಘೋಷಣೆ ಮಾಡಿರುವ ಎಫ್.ಆರ್.ಪಿ ಯಲ್ಲಿ ಒಂದು ಟನ್ ಕಬ್ಬಿಗೆ 5000 ಹೆಚ್ಚಳ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದರು
ಈ ವೇಳೆ ಜಿಲ್ಲಾ ಗೌರವಾಧ್ಯಕ್ಷರಾದ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ವಿರೇಶ ಗೊಬ್ಬುರ, ಮಹಿಳಾ ಜಿಲ್ಲಾಧ್ಯಕ್ಷರಾದ ರೇಖಾ ಪಾಟೀಲ, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿಗಳಾದ ಪ್ರತಾಪ ನಾಗರಗೋಜಿ , ಜಿಲ್ಲಾ ಸಂಚಾಲಕರಾದ ನಜೀರ ನಂದರಗಿ, ಸದಸ್ಯರಾದ ಭೀರಪ್ಪ ನಿಪ್ಪಾಣಿ, ಸದಸ್ಯರಾದ ದಾವಲಸಾಬ ನಂದರಗಿ, ರೋಣ್ಯಾಳ ಅಧ್ಯಕ್ಷರಾದ ಬಸ್ಸು ನ್ಯಾಮಗೊಂಡ, ಕೋಲ್ಹಾರಕಾರ್ಯದರ್ಶಿಗಳಾದ ಶ್ರೀಶೈಲ ಬಾಡಗಿ, ಆಸಂಗಿ ಅಧ್ಯಕ್ಷರಾದ ಶಶಿಕಾಂತ ಬಿರಾದಾರ, ಕೋಲ್ಹಾರ ಪ್ರಧಾನ ಕಾರ್ಯದಶಿಗಳಾದ ಈರಣ್ಣ ಗೊಳಸಂಘಿ, ಕೋಲ್ಹಾರ ಸಂಚಾಲಕರಾದ ಶ್ರೀಶೈಲ ಬೆಣ್ಣೂರ ಸೇರಿದಂತೆ ಅನೇಕರು ಇದ್ದರು.