ಕಬ್ಬಿಗೆ 5500ರೂ.ಗಳ ದರ ನಿಗದಿಗೆ ಆಗ್ರಹಿಸಿ ರೈತರಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ:ರಸ್ತೆ ಮೇಲೆ ಉರುಳಾಡಿ ಬೊಬ್ಬೆ ಹಾಕಿ ಪ್ರತಿಭಟನೆ

ಕಲಬುರಗಿ.ಅ.31: ಪ್ರತಿ ಟನ್ ಕಬ್ಬಿಗೆ 5500ರೂ.ಗಳ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮಿನಿವಿಧಾನಸೌಧದ ಮುಖ್ಯ ದ್ವಾರಗಳನ್ನು ಮುಚ್ಚಿದ್ದರಿಂದ ಆಕ್ರೋಶಗೊಂಡ ರೈತರು ರಸ್ತೆ ಮೇಲೆ ಹೊರಳಾಡಿ ಬೊಬ್ಬೆ ಹಾಕಿದರು. ಅಷ್ಟೇ ಅಲ್ಲದೇ ರಸ್ತೆ ತಡೆ ಚಳುವಳಿ ಮಾಡಿದರು.
ಕೇಂದ್ರ ಸರರ್ಕಾರವು ಉಲ್ಲೇಖಿತ ಒಂದರತೆ 2022-23ನೇ ಸಾಲಿನ ಸಕ್ಕರೆ ಹಂಗಾಮಿ ನಿಗಧಿಪಡಿಸಿರುವ ನ್ಯಾಯ ಮತ್ತು ಲಾಭದಾಯಕರ ದರ(ಎಫ್‍ಆರ್‍ಪಿ) ಆಧಾರದ ಮೇಲೆ ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ಅಧಿನಿಯಮ-2013 ಮತ್ತು ತಿದ್ದುಪಡಿ 2014ನೇ ಕಲಂ ಅನ್ವಯ ಅಧಿಕಾರವನ್ನು ಚಲಾಯಿಸಿ, ಸಕ್ಕರೆ ಆಯುಕ್ತರು ಆದೇಶ ಹೊರಡಿಸಿ ಈ ಸಾಲಿನ ರಾಜ್ಯದಲ್ಲಿ 73 ಸಕ್ಕರೆ ಕಾರ್ಖಾನೆಗಳು ಇದ್ದು ನುರಿಸಿದ ಕಬ್ಬಿನ ಉತ್ಪಾದಿಸಲಾದ ಸಕ್ಕರೆ ಇಳುವರಿಯನ್ನು ಆಧಾರವಾಗಿ ಇಟ್ಟುಕೊಂಡು 2022-2023ನೇ ಸಾಲಿನ ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ತಿದ್ದುಪಡಿ-2014ರ ನಿಯಮದ ಪ್ರಕಾರ ಮೊದಲನೇ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು(ಎಫ್‍ಆರ್‍ಪಿ)ಯನ್ನು ಈಗಾಗಲೇ ಅಧಿಕೃತ ಆದೇಶ ಅಂಕಿ ಅಂಶಗಳ ಸಮೇತ ಕೇಂದ್ರ ಸರ್ಕಾರದನ್ವಯ ಈಗಾಗಲೇ ಸಕ್ಕರೆ ಆಯುಕ್ತಕರು ಆದೇಶ ಹೊರಡಿಸಿದ್ದರೂ ಕೂಡಾ ಈ ಭಾಗದ ಸಕ್ಕರೆ ಕಾರ್ಖಾನೆಗಳು ರೈತರ ಜೊತೆ ಚೆಲ್ಲಾಟವಾಡಿ ದರ ನಿಗಧಿ ಮಾಡದೇ ರೈತರ ಜೊತೆ ಚಲ್ಲಾಟವಾಡುತ್ತಿದೆ ಎಂದು ಪ್ರತಿಭಟನೆಕಾರರು ರಸ್ತೆ ಮೇಲೆ ಆಕ್ರೋಶ ಹೊರಹಾಕಿದರು.
ಕಬ್ಬಿನ ಬೆಲೆ ನಿಗಧಿಗಾಗಿ ರೈತರ ಬೆಳೆದ ಕಬ್ಬಿಗೆ ಈ ಭಾಗದ ಸಕ್ಕರೆ ಕಾರ್ಖಾನೆಗಳು ನಿಗಧಿತ ಧರವನ್ನು ಗೊತ್ತುಪಡಿಸಬೇಕು. ಅಲ್ಲದೇ ಸಕ್ಕರೆ ಕಾರ್ಖಾನೆಯವರು ಸಾಗಾಣಿಕೆ ವೆಚ್ಚವನ್ನು ಎಷ್ಟು ಕಡಿತ ಮಾಡುತ್ತೀರಿ ಎಂದು ರೈತರಿಗೆ ಗೊತ್ತುಪಡಿಸಬೇಕು. ಈಗಾಗಲೇ ಬೆಳಗಾವಿ, ಬಾಗಲಕೋಟೆ, ಹಾಗೂ ಇತರೆ ಕಾರ್ಖಾನೆಯವರು ಕಬ್ಬಿಗೆ ನಿಖರವಾದ ಬೆಲೆಯನ್ನು ಘೋಷಣೆ ಮಾಡಿದಂತೆ ಈ ಭಾಗದಲ್ಲಿಯೂ ಕೂಡಾ ಕಬ್ಬಿಗೆ ನಿಗಧಿತ ಬೆಲೆಯನ್ನು ಘೋಷಣೆ ಮಾಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಅವರಿಗೆ ಪೋಲಿಸರು ತಡೆದರು. ಪೋಲಿಸರು ಮತ್ತು ಪ್ರತಿಭಟನೆಕಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಒಂದು ಹಂತದಲ್ಲಿ ಉದ್ರಿಕ್ತ ರೈತರು ಪೋಲಿಸರ ವಿರೋಧವನ್ನು ಖಂಡಿಸಿ ರಸ್ತೆ ಮೇಲೆ ಉರುಳಾಡಿ ಆಕ್ರೋಶ ಹೊರಹಾಕಿದರು. ಕೆಲವರು ಬೊಬ್ಬೆ ಹಾಕಿದರು. ಹಲಿಗೆಗಳ ಮೇಳದೊಂದಿಗೆ ಪ್ರತಿಭಟನೆ ಮಾಡಿದ್ದರಿಂದ ಸ್ಥಳದಲ್ಲಿ ಒಂದು ರೀತಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು.
ಬಿಗಿ ಪೋಲಿಸ್ ಬಂದೋಬಸ್ತ್‍ನಲ್ಲಿ ಮುಖ್ಯ ದ್ವಾರದ ಬಳಿಗೆ ಬಂದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಪ್ರತಿಭಟನೆಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ಎಫ್‍ಆರ್‍ಪಿ ದರ ನಿಗದಿಪಡಿಸಲಾಗಿದೆ. ಸಾಗಾಣಿಕೆ ವೆಚ್ಚದ ಕುರಿತು ಇನ್ನೂ ನಿರ್ಧರಿಸಬೇಕಾಗಿದೆ. ಆ ದಿಸೆಯಲ್ಲಿ ಕಾರ್ಖಾನೆಯವರು ಹಾಗೂ ರೈತರೊಂದಿಗೆ ಒಡಂಬಡಿಕೆ ಆಗಬೇಕು. ಆ ದಿಸೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ರಾಜಾಪೂರ್, ರಾಜ್ಯ ಉಪಾಧ್ಯಕ್ಷ ಬಸವರಾಜ್ ಪಾಟೀಲ್, ಶಾಂತವೀರಪ್ಪ ಕಲಬುರ್ಗಿ, ನಾಗಿಂದ್ರಪ್ಪ ದೇಶಮುಖ್, ರಮೇಶ್ ಹೂಗಾರ್, ಧರ್ಮರಾಜ್ ಸಾಹು, ಶಂತವೀರ್ ಪಾಟೀಲ್ ದಸ್ತಾಪುರ, ಶರಣು ಬಿಲ್ಲಾಡ್, ಸತೀಶ್ ಪಾಟೀಲ್ ಕೊರವಿ, ಚಂದ್ರಕಾಂತ್ ಸೂಗೂರ್, ಕರಬಸಪ್ಪ ಉಜ್ಚಾ ಹರಸೂರ್, ಶರಣು ಮಗಾ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.