ಕಬ್ಬಿಗೆ 3500ರೂ.ಗಳ ಬೆಂಬಲ ಬೆಲೆ ನೀಡಲು ಆಗ್ರಹಿಸಿ ನಾಳೆ ರೈತ ಸಂಘಟನೆಗಳ ಪ್ರತಿಭಟನೆ

ಕಲಬುರಗಿ.ನ.7: ಪ್ರಸ್ತುತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 3500ರೂ.ಗಳ ಬೆಂಬಲ ಬೆಲೆ ನಿಗದಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 9ರಂದು ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಶೌಕತ್ ಅಲಿ ಆಲೂರ್ ಅವರು ಇಲ್ಲಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಯೋಗ್ಯ ಬೆಂಬಲ ಬೆಲೆ ನಿಗದಿಗೊಳಿಸದೇ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯವನ್ನು ಆರಂಭಿಸುವುದಕ್ಕೆ ವಿರೋಧವಿದೆ ಎಂದರು.
ಮೊದಲೇ ಕೊರೋನಾ ಮಹಾಮಾರಿ ಸಂಕಷ್ಟದಿಂದ ಹಾಗೂ ಅತಿವೃಷ್ಟಿ ಮತ್ತು ನೆರೆಹಾವಳಿಗೆ ಒಳಗಾಗಿ ರೈತರು ತೀವ್ರ ನೊಂದಿದ್ದು, ಇಂತಹ ಸಂದರ್ಭದಲ್ಲಿ ಸೂಕ್ತ ಬೆಂಬಲ ಬೆಲೆ ಇಲ್ಲದೇ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೆ ರೈತರು ಶೋಷಣೆಗೆ ಒಳಗಾಗುವರು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಬ್ಬಿನ ಬೆಲೆಯ ಮಾಹಿತಿಯನ್ನು ರೈತರಿಗೆ ನೀಡದೇ ನಾಗರಹಳ್ಳಿಯ ಉಗಾರ್ ಶುಗರ್ ಮತ್ತು ಭೂಸನೂರುಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಮುಂದಾಗಿರುವುದನ್ನು ಜಿಲ್ಲಾಧಿಕಾರಿಗಳು ಈ ಕೂಡಲೇ ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರ ನೀಡಿ ರೈತರಿಗೆ ವಂಚಿಸಲಾಗುತ್ತಿದೆ. ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2,500ರೂ.ಗಳ ಎಫ್‍ಆರ್‍ಸಿ ದರ ನಿಗದಿಗೊಳಿಸಲಾಗಿತ್ತು. ಆದಾಗ್ಯೂ, ಅಫಜಲಪೂರ್ ತಾಲ್ಲೂಕಿನ ಹಾವಳಗಾ ರೇಣುಕಾ ಶುಗರ್ಸ್ ಕಾರ್ಖಾನೆ 2,300ರೂ.ಗಳನ್ನು ಮಾತ್ರ ನೀಡಿತ್ತು. ಅದೇ ರೀತಿ ಜಿಲ್ಲೆಯ ಇತರೆ ಕಾರ್ಖಾನೆಗಳೂ ಸಹ ರೇಣುಕಾ ಶುಗಸ್ ರ್ವ ಮಾದರಿಯನ್ನು ಅನುಸರಿಸುವ ಮೂಲಕ ರೈತರಿಗೆ ಹಿಂದಿನ ವರ್ಷ ಪ್ರತಿ ಟನ್ ಕಬ್ಬಿಗೆ 200ರೂ.ಗಳನ್ನು ವಂಚಿಸಿದವು ಎಂದು ಅವರು ಆರೋಪಿಸಿದರು.
ಈ ವರ್ಷವೂ ಸಹ ಹಾವಳಗಾ ರೇಣುಕಾ ಸಕ್ಕರೆ ಕಾರ್ಖಾನೆಯವರು ಎಫ್‍ಆರ್‍ಸಿ ದರವನ್ನು 2,853ರೂ.ಗಳಿಗೆ ನಿಗದಿಗೊಳಿಸಿದೆ. ಆದಾಗ್ಯೂ, ಸರ್ಕಾಋವು ನಿಗದಿಗೊಳಿಸಿದ ದರದಲ್ಲಿ ಬಿಲ್ ಪಾವತಿಸದೇ ಪ್ರತಿ ವರ್ಷವೂ ಸಹ ಕಾರ್ಖಾನೆಗಳು ಕಬ್ಬು ಬೆಳೆಗಾರರನ್ನು ವಂಚಿಸುತ್ತಿವೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಜೇವರ್ಗಿ, ಅಫಜಲಪೂರ್ ಹಾಗೂ ಕಲಬುರ್ಗಿ, ಆಳಂದ್ ತಾಲ್ಲೂಕಿನ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ನಿಗದಿತ ದರ ಪಡೆಯದೇ ವಂಚನೆಗೆ ಒಳಗಾಗುತ್ತಿದ್ದು, ಅದನ್ನು ತಪ್ಪಿಸಿ, ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿಯೇ ಕಬ್ಬು ಖರೀದಿಸಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು ಹಾಗೂ ಸಭೆಯನ್ನು ಸಹ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಇನ್ನು ಅತಿವೃಷ್ಟಿ ಹಾಗೂ ನೆರೆಹಾವಳಿಯಿಂದ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತಿ ಎಕರೆಗೆ 20,000ರೂ.ಗಳ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಹತ್ತಿ ಮಿಲ್‍ಗಳನ್ನು ತಕ್ಷಣ ಆರಂಭಿಸುವಂತೆ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯಲು ನೇರವಾಗಿ ಹತ್ತಿ ಖರೀದಿಸುವಂತೆ, ಈ ಸಂಬಂಧ ಟೋಕನ್ ಪದ್ದತಿಯನ್ನು ಕೈಬಿಡುವಂತೆ ಅವರು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 9ರಂದು ಯಡ್ರಾಮಿ ತಾಲ್ಲೂಕಿನ ನಾಗರಳ್ಳಿ ಕ್ರಾಸ್‍ನಲ್ಲಿ ರಸ್ತೆ ತಡೆ ಚಳುವಳಿ ಮತ್ತು ಆಳಂದ್ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿರತಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ, ಅಖಿಲ ಭಾರತ್ ಕಿಸಾನ್ ಸಭಾ, ಬಿಸಿಲುನಾಡಿನ ಹಸಿರುಸೇನೆ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೌಲಾ ಮುಲ್ಲಾ, ಈರಣ್ಣ ಭಜಂತ್ರಿ, ತಮ್ಮಣ್ಣ ಬಾಗೇವಾಡಿ, ವಸಂತರಾಯ್ ನರಿಬೋಳ್, ಲಾಲೆಸಾಬ್ ಮಣಿಯಾರ್ ಮುಂತಾದವರು ಉಪಸ್ಥಿತರಿದ್ದರು.