ಕಬ್ಬಿಗೆ ಹೆಚ್ಚಿನ ದರ ನಿಗದಿಗೆ ಆಗ್ರಹಿಸಿ ರೈತ ಪರ ಸಂಘಟನೆಗಳ ಬೆಂಬಲ

ಧಾರವಾಡ, ನ 7: ರೈತರು ಬೆಳೆದ ಕಬ್ಬಿಗೆ ಹೆಚ್ಚಿನ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ದ ಕಳೆದ 5 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಪರ ಸಂಘನೆಗಳಿಂದ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಹೋರಾಟದಲ್ಲಿ ವಿವಿಧ ರೈತ ಪರ ಸಂಘಟನೆಗಳ ಮುಖಂಡರ ನಿಯೋಗವು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಮುಖಂಡರುಗಳು ಮಾತನಾಡಿ, ಈ ಹಿಂದೆ ರೈತರು ಬೆಳೆದ ಕಬ್ಬಿಗೆ ಹಳಿಯಾಳದಲ್ಲಿರುವ ಪ್ಯಾರಿ ಶುಗರ್ ಫ್ಯಾಕ್ಟರಿ ರವರು ಪ್ರತಿ ಟನ್ ಕಬ್ಬಿಗೆ 2,591 ರೂ. ನಿಗದಿ ಮಾಡಿದ್ದರು. ಈಗ 2,371 ರೂ. ನೀಡುತ್ತಿದ್ದಾರೆ. ಇದು ರೈತರಿಗೆ ಮಾಡುವ ವಂಚನೆ. ಆದಕಾರಣ ಹೆಚ್ಚಿನ ದರ ಅಂದರೆ ಪ್ರತಿ ಟನ್‍ಗೆ ಕನಿಷ್ಟ 3,500 ರೂ. ನಿಗದಿ ಪಡಿಸುವಂತೆ ಒತ್ತಾಯಿಸಿದರು.
ನಿರಂತರ ಹೋರಾಟಗಳನ್ನು ನಡೆಸುತ್ತಿರುವ ಈ ಹೋರಾಟಕ್ಕೆ ಕಿವಿಗೊಡದ ರಾಜ್ಯ ಸರಕಾರವು ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೇಂದ್ರ ಸರಕಾರವು ಕಳೆದ 7 ವರ್ಷಗಳಿಂದ ನಿರಂತರಾಗಿ ರೈತರ ಮೇಲೆ ದಬ್ಬಾಳಿಕೆ ಮಾಡತೊಡಗಿದೆ. ಈಗಾಗಲೇ ರಾಜ್ಯದಲ್ಲಿ ಕೃಷಿ ಕಾಯ್ದೆ ನೀತಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ವಿದ್ಯುತ್ ಕಾಯ್ದೆ ಖಾಸಗೀಕರಣ ಜಾರಿಗೊಳಿಸಿದ್ದರ ವಿರುದ್ದ ದೇಶ ವ್ಯಾಪ್ತಿಯಲ್ಲಿ ಹೋರಾಟಗಳಿಂದಾಗಿ ಹಿಂದೆ ಪಡೆಯುವುದಾಗಿ ಕೇಂದ್ರ ಸರಕಾರವು ಹೇಳಿತ್ತು. ಆದರೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಇದೆಲ್ಲದರ ಕುರಿತು ರೈತರು ಹಾಗೂ ಸಾರ್ವಜನಿಕರೊಂದಿಗೆ ಚೆಲ್ಲಾಟವಾಡುತಿದ್ದು ಕೂಡಲೇ ಸರಕಾರ ಎಚ್ಚತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಹೆಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯವು ರಾಷ್ಟ್ರದ ಮೂರನೇ ಅತಿದೊಡ್ಡ ಸಕ್ಕರೆ ಉತ್ಪಾದನೆಯ ರಾಜ್ಯವಾಗಿದೆ. ಆದಕಾರಣ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರೈತರು ಬೆಳೆದ ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ದರ ನಿಗದಿಗೊಳಿಸುವವರೆಗೂ ಸರಕಾರದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ವಿವಿಧ ರೈತ ಪರ ಸಂಘಟನೆಗಳ ಮುಖಂಡರುಗಳಾದ ಉಳವಪ್ಪಣ್ಣ ಬೆಳೆಗೆರೆ, ಉಪಾಧ್ಯಕ್ಷರು ಕಬ್ಬು ಬೆಳೆಗಾರರ ಸಂಘ ಧಾರವಾಡ, ಬಸನಗೌಡರ್ ಸಿದ್ದನಗೌಡರ್, ರಾಜಶೇಖರ ಮೆಣಸಿನಕಾಯಿ, ಮುತ್ತಣ್ಣ ಶಿವಳ್ಳಿ, ಬಾಬಾಜನ್ ಮುಧೋಳ, ಚನ್ನಬಸಪ್ಪ ತಡಸ್, ಬಸಪ್ಪ ಅದರ್ಗುಂಚಿ, ಅಂದಾನೆಪ್ಪ ದೂಳ್ಳಿನ, ಮಾರುತಿ ಇರಿಕಾಯಿ, ರಾಮಪ್ಪ ನೆಲ್ಲಿಹರ್ವಿ, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.