ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಗೆ ಬಿರಾದಾರ್ ಆಗ್ರಹ

ಕಲಬುರಗಿ.ನ.6: ಕಬ್ಬಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೈತರ ಸಭೆ ಕರೆಯಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಸಂಚಾಲಕ ಶ್ರೀಮಂತ್ ಬಿರಾದಾರ್ ಅವರು ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರ ನೀಡಿ ರೈತರಿಗೆ ವಂಚಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2,500ರೂ.ಗಳ ಎಫ್‍ಆರ್‍ಸಿ ದರ ನಿಗದಿಗೊಳಿಸಲಾಗಿತ್ತು. ಆದಾಗ್ಯೂ, ಅಫಜಲಪೂರ್ ತಾಲ್ಲೂಕಿನ ಹಾವಳಗಾ ರೇಣುಕಾ ಶುಗರ್ಸ್ ಕಾರ್ಖಾನೆ 2,300ರೂ.ಗಳನ್ನು ಮಾತ್ರ ನೀಡಿತ್ತು. ಅದೇ ರೀತಿ ಜಿಲ್ಲೆಯ ಇತರೆ ಕಾರ್ಖಾನೆಗಳೂ ಸಹ ರೇಣುಕಾ ಶುಗಸ್ ರ್ವ ಮಾದರಿಯನ್ನು ಅನುಸರಿಸುವ ಮೂಲಕ ರೈತರಿಗೆ ಹಿಂದಿನ ವರ್ಷ ಪ್ರತಿ ಟನ್ ಕಬ್ಬಿಗೆ 200ರೂ.ಗಳನ್ನು ವಂಚಿಸಿದವು ಎಂದು ಅವರು ಆರೋಪಿಸಿದರು.
ಈ ವರ್ಷವೂ ಸಹ ಹಾವಳಗಾ ರೇಣುಕಾ ಸಕ್ಕರೆ ಕಾರ್ಖಾನೆಯವರು ಎಫ್‍ಆರ್‍ಸಿ ದರವನ್ನು 2,853ರೂ.ಗಳಿಗೆ ನಿಗದಿಗೊಳಿಸಿದೆ. ಆದಾಗ್ಯೂ, ಸರ್ಕಾಋವು ನಿಗದಿಗೊಳಿಸಿದ ದರದಲ್ಲಿ ಬಿಲ್ ಪಾವತಿಸದೇ ಪ್ರತಿ ವರ್ಷವೂ ಸಹ ಕಾರ್ಖಾನೆಗಳು ಕಬ್ಬು ಬೆಳೆಗಾರರನ್ನು ವಂಚಿಸುತ್ತಿವೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಜೇವರ್ಗಿ, ಅಫಜಲಪೂರ್ ಹಾಗೂ ಕಲಬುರ್ಗಿ, ಆಳಂದ್ ತಾಲ್ಲೂಕಿನ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ನಿಗದಿತ ದರ ಪಡೆಯದೇ ವಂಚನೆಗೆ ಒಳಗಾಗುತ್ತಿದ್ದು, ಅದನ್ನು ತಪ್ಪಿಸಿ, ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿಯೇ ಕಬ್ಬು ಖರೀದಿಸಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಎಕ್ಸ್‍ಫೀಲ್ಡ್‍ನಿಂದಲೇ ಸರ್ಕಾರದ ಎಫ್‍ಆರ್‍ಪಿ ದರ ನೀಡಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ರೈತರ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.
ಇನ್ನು ಜಿಲ್ಲೆಯ ಅಫಜಲಪೂರ್ ತಾಲ್ಲೂಕಿನಲ್ಲಿ ಭೀಮಾ ಯೋಜನೆಯನ್ನು ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ. ಇದರಿಂದ ನೆರೆ ಹಾವಳಿ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗುತ್ತಿದೆ. ರೈತರ ವಿದ್ಯುತ್ ಪಂಪ್‍ಸೆಟ್ಟುಗಳು, ವಿದ್ಯುತ್ ಪರಿವರ್ತಕಗಳು ಹಾಳಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭೀಮಾ ನದಿಯ ಪ್ರವಾಹದಿಂದಾಗಿ ಅನೇಕ ರೈತರ ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿದ್ದು, ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದ ಅಧಿಕಾರಿಗಳು ತಕ್ಷಣವೇ ವಿದ್ಯುತ್ ಪರಿವರ್ತಕಗಳನ್ನು ನೀಡದೇ ಸತಾಯಿಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಾಳೆ ಮಾನ್ಪಡೆಯವರಿಗೆ ಶೃದ್ಧಾಂಜಲಿ ಸಭೆ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನವೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ರೈತ, ಕಾರ್ಮಿಕ ಹಿರಿಯ ಮುಖಂಡ ದಿ. ಮಾರುತಿ ಮಾನ್ಪಡೆಯವರಿಗೆ ಶೃದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ವಿಜುಕೃಷ್ಣನ್, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಮುಂತಾದವರು ಆಗಮಿಸುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೇಘರಾಜ್ ಕಠಾರೆ, ಪಾಂಡುರಂಗ್ ಮಾವಿನಕರ್, ಅಶೋಕ್ ಮ್ಯಾಗೇರಿ, ಗೌರಮ್ಮ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.