ಕಬ್ಬಿಗೆ ಮಧ್ಯಂತರ ಹೆಚ್ಚುವರಿ ಬೆಲೆ ಘೋಷಣೆ:36 ದಿನಗಳ ಸತ್ಯಾಗ್ರಹ ಮುಕ್ತಾಯ

ಮುದ್ದೇಬಿಹಾಳ: ಜ.7: ಕಬ್ಬಿಗೆ ಎಫ್‍ಆರ್‍ಪಿ ಜೊತೆಗೆ ಮಧ್ಯಂತರ ಹೆಚ್ಚುವರಿ ಬೆಲೆ ಘೋಷಣೆ ಮಾಡಿರುವ ಸರ್ಕಾರದ ಆದೇಶ ಸ್ವಾಗತಿಸಿ ಇಲ್ಲಿನ ತಾಲೂಕು ಆಡಳಿತ ಸೌಧ ಎದುರು 36ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರೈತ ಸಂಘ ಮತ್ತು ವಿವಿಧ ಬೆಂಬಲಿತ ಸಂಘಟನೆಗಳು ಗುರುವಾರ ಮುಕ್ತಾಯಗೊಳಿಸಿವೆ.

ಸರ್ಕಾರದ ಪ್ರತಿನಿಧಿಯಾಗಿ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರು ಸರ್ಕಾರದ ಆದೇಶವನ್ನು ರೈತ ಮುಖಂಡರಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡರು 2022ರ ನವೆಂಬರ್ 29ರಿಂದ ಹಲವು ಬೇಡಿಕೆ ಮುಂದಿಟ್ಟು ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿತ್ತು.

ನಮ್ಮಂತೆ ರಾಜ್ಯಾದ್ಯಂತ ರೈತರು ಹೋರಾಟ ಪ್ರಾರಂಭಿಸಿದ್ದರು. ಹೋರಾಟಕ್ಕೆ ಮಣಿದ ಸರ್ಕಾರ ರೈತರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ಬೆಲೆ ಹೆಚ್ಚಳ ಬೇಡಿಕೆ ಈಡೇರಿಸಲು ಕಾರ್ಖಾನೆಯಿಂದ ಸಕ್ಕರೆ ಇಳುವರಿ ಜೊತೆಗೆ ಇತರೆ ಉತ್ಪನ್ನಗಳ ಆದಾಯದ ಬಗ್ಗೆ ಸಮೀಕ್ಷೆ ನಡೆಸಿ ದರ ನಿಗದಿಗೊಳಿಸಲು ತಜ್ಞರ ಸಮಿತಿ ರಚನೆ ಮಾಡಿ ತಾತ್ಕಾಲಿಕವಾಗಿ ತಕ್ಷಣದಿಂದಲೇ ಪ್ರತಿ ಟನ್ ಕಬ್ಬಿಗೆ ಇತರೆ ಉತ್ಪನ್ನಗಳ ಬೇಲೆ 100 ರೂ ಮತ್ತು ಎಥೆನಾಲ್ ಮೇಲೆ 50 ರೂ ಸೇರಿ ಒಟ್ಟು 150 ರೂ ಹೆಚ್ಚುವರಿಯಾಗಿ ನೀಡಬೇಕೆಂದು ಆದೇಶ ಮಾಡಿದ್ದನ್ನು ರೈತರು ಸ್ವಾಗತಿಸುತ್ತೇವೆ ಎಂದರು.

ಅಂತಿಮ ವರದಿ ಪಡೆದು ಮುಂದಿನ ದಿನಗಳಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಪೂರ್ವದಲ್ಲೇ ರೈತರ ಬೇಡಿಕೆಯನುಸಾರ ಬೆಲೆ ನಿಗದಿ ಜೊತೆಗೆ ಇತರೆ ಬೇಡಿಕೆಗಳನ್ನೂ ಈಡೇರಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಅರವಿಂದ ಕೊಪ್ಪ, ಸಂಗಪ್ಪ ಬಾಗೇವಾಡಿ, ಗುರುಸಂಗಪ್ಪಗೌಡ ಹಂಡರಗಲ್ಲ, ಹುಸೇನ ಮುಲ್ಲಾ{ಕಾಳಗಿ} ಅಯ್ಯಪ್ಪ ಬಿದರಕುಂದಿ, ಶಿವಪ್ಪ ಬೇವಿನಮಟ್ಟಿ, ತಿರುಪತಿ ಬಂಡಿವಡ್ಡರ, ಸಂಗಮೇಶ, ಎಚ್.ಬಿ.ಬಾದರದಿನ್ನಿ, ಎಂ.ಎಸ್.ವಾಲಿಕಾರ, ವೈ.ಎಲ್.ಬಿರಾದಾರ, ಸಂಗಪ್ಪ ಕತ್ತಿ, ಹುಲಗಪ್ಪ ವಡವಡಗಿ, ಸಂಗಪ್ಪ ಗುಳಬಾಳ, ಶಿವಬಸಪ್ಪ ಪೂಜಾರಿ, ಗುರಪ್ಪ ಬಿರಾದಾರ ಸೇರಿ ಹಲವರು ಇದ್ದರು. ಪಿಎಸೈ ಆರೀಫ ಮುಷಾಪುರಿ ಸ್ಥಳದಲ್ಲಿ ಸಿಬ್ಬಂದಿಯೊಂದಿಗೆ ಹಾಜರಿದ್ದರು. ಇದೇ ವೇಳೆ ಸತ್ಯಾಗ್ರಹ ಹಿಂಪಡೆದುಕೊಂಡಿರುವ ಕುರಿತು ಮತ್ತು ಮುಂದಿನ ವರ್ಷದ ಕಬ್ಬು ಕಟಾವು ಹಂಗಾಮಿಗೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ ಪತ್ರವನ್ನು ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರಿಗೆ ಸಲ್ಲಿಸಲಾಯಿತು.ಈ ವೇಳೆ ಪಿಎಸೈ ಮುಷಾಪುರಿ, ರೈತ ಮುಖಂಡರು ಇದ್ದಾರೆ.