ಕಬ್ಬಿಗೆ ದರ ನಿಗದಿ ಪಡಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ಶುರು

ಆಳಂದ:ನ.3: ಕಬ್ಬಿಗೆ ದರ ನಿಗದಿಪಡಿಸಿ ನುರಿಸಬೇಕು ಎಂದು ಒತ್ತಾಯಿಸಿ ಭೂಸನೂರ ಹತ್ತಿರದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಮುಂದೆ ತಾಲೂಕಿನ ಕಬ್ಬು ಬೆಳೆಗಾರರು ಸಾಮೂಹಿಕವಾಗಿ ಬುಧವಾರ ಧರಣಿ ಸತ್ಯಾಗ್ರಾಹ ಆರಂಭಿಸಿದ್ದಾರೆ.

ಕಳೆದ ಸಾಲಿನಲ್ಲಿ ನೀಡಿದ 2350 ರೂಪಾಯಿ ನೀಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ, 2022-23ರ ಸಾಲಿಗೆ ನೆರೆಯ ಅಫಜಲಪೂರ ತಾಲೂಕಿನ ರೇಣುಕ್ ಶುಗರ್ಸ್ ಕಾರ್ಖಾನೆಯವರು 2500 ರೂಪಾಯಿ ಪ್ರತಿಕ್ವಿಂಟಲಗೆ ದರ ಮೊದಲು ಕಂತು ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲಿ ಇನ್ನೂ ಹೆಚ್ಚಿಗೆ ನೀಡುವ ಸಾಧ್ಯತೆ ಇದೆ. ಆದರೆ ಇಲ್ಲಿನ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯುವರು ಪ್ರತಿ ಕ್ವಿಂಟಲಗೆ ಕಳೆದ ಸಾಲಿನ ದರವೇ 2350 ರೂಪಾಯಿಗಳ ದರ ಮಾತ್ರ ನೀಡುವುದಾಗಿ ಹೇಳಿರುವುದು ಸರಿಯಲ್ಲ. ಪ್ರತಿಬಾರಿ ನೆರೆ ಕಾರ್ಖಾನೆಗಳ ದರ ಕೊಡುವುದಾಗಿ ಹೇಳಿ ಈ ಬಾರಿ ನೀಡಲು ಹಿಂದೇಟು ಹಾಕಲಾಗಿದೆ. 2500 ರೂಪಾಯಿ ಪ್ರತಿಕ್ವಿಂಟಲಗೆ ದರ ನೀಡಬೆಕು ಎಂದು ಆಗ್ರಹಿಸಿದರು.

2020-21ಸಾಲಿಗೆ ನೀಡಿದ ಕಬ್ಬು ಸಾಗಾಣೆಯ ಸಾರಿಗೆ ಮತ್ತು ಕಟಾವು ಬೆಲೆಯು ಕೊಟ್ಟಿದರಲ್ಲೇ ಈ ಬಾರಿ ಕಡಿಮೆ ಮಾಡಿರುವುದು ಸರಿಯಲ್ಲ ಹಿಂದಿನ ದರವೇ ಮುಂದುವರೆಸಬೇಕು. 2021-22ರಲ್ಲಿ ರಸೀದಿಯಲ್ಲಿ ದಾಖಲಾದ ಸಾಗಣೆ ಕಿ.ಮೀ.ದಂತೆ ಈ ಬಾರಿಯೂ ಬೆಲೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ, ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಿಳಿಯ ನಿರ್ದೇಶಕ ಧರ್ಮರಾಜ ಸಾಹು, ಅಲ್ಲದೆ ನಿರ್ದೇಶಕ ಹಾಗೂ ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗಳೆ, ಶಿವರಾಜ ಮಹಾಗಾಂವ, ಶಿವರಾಜ ಪಾಟೀಲ, ಪ್ರಕಾಶ ಸಣ್ಣಮನಿ, ಜೆಸ್ಕಾಂ ನಿರ್ದೇಶಕ ವೀರಣ್ಣಾ ಮಂಗಾಣೆ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ ಕೊರಳ್ಳಿ, ಅಶೋಕ ಗುತ್ತೇದಾರ, ರಾಜಶೇಖರ ಮಲಶೆಟ್ಟಿ, ಚಂದ್ರಶೇಖರ ಸಾಹು, ಆನಂತರಾಜ ಸಾಹು ಅಣ್ಣಾರಾವ್ ಕವಲಗಾ, ಕಲ್ಯಾಣಿ ಜಮಾದಾರ, ಆದಿನಾಥ ಹೀರಾ, ಸುರೇಶ ನಂದ್ಯಾಣಿ, ಲಕ್ಷ್ಮಣ ಬೀಳಗಿ, ಅಮೃತ ದೇಶಟ್ಟಿ, ಸುಭಾಷ ರಾಠೋಡ, ಶಿವು ರಾಠೋಡ ಮತ್ತಿತರು ಭಾಗವಹಿಸಿದ್ದರು.

ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು ಮನವಿ ಸ್ವೀಕರಿಸಿ ಈ ಕುರಿತು ಬೇಡಿಕೆಯನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದರಾದರು ಲಿಖಿತರ ಭರವಸೆ ನೀಡಿದರೆ ಮಾತ್ರ ಸತ್ಯಾಗ್ರಹ ವಾಪಸ್ಸು ಪಡೆಯಲಾಗುವುದು ಎಂದು ಧರಣಿ ನಿರತರು ಪಟ್ಟುಹಿಡಿದುಕೊಂಡಿದ್ದರು.

ಟನ್ ಕಬ್ಬಿಗೆ 2500 ನೀಡಲು ಗುತ್ತೇದಾರ ಮನವಿ:

ಭೂಸನೂರ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ 2500 ನೀಡಲು ಕಾರ್ಖಾನೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಸಕ್ಕರೆ ಸಚಿವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬುಧುವಾರ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ. ಪಾಟೀಲ ಮುನೇನಕೊಪ್ಪ ಅವರನ್ನು ಭೇಟಿ ಮಾಡಿ, ಭೂಸನೂರ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಯುವ ರೈತರ ಪ್ರತಿ ಟನ್ ಕಬ್ಬಿಗೆ 2300 ರೂ ಕೊಡುತ್ತಿದ್ದಾರೆ, ಆದರೆ ಸಮೀಪದ ರೇಣುಕಾ ಸಕ್ಕರೆ ಕಾರ್ಖಾನೆಯವರು 2500 ರೂ ಕೊಡುತ್ತಿದ್ದಾರೆ ಆದ್ದರಿಂದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಕೂಡ 2500 ರೂ ಗೆ ಹೆಚ್ಚಳ ಮಾಡಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದಾರೆ.