ಕಬ್ಬಿಗೆ ಎಫ್‍ಆರ್‍ಪಿ ದರದಲ್ಲಿ ಹಣ ಪಾವತಿಸಲು ಸೂಚನೆ

ಕಲಬುರಗಿ :ನ. 21: 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ನ್ಯಾಯ ಮತ್ತು ಲಾಭದಾಯಕ ( ಎಫ್.ಆರ್.ಪಿ.) ದರದಂತೆ ಕಬ್ಬು ಬೆಳಗಾರರಿಗೆ ಹಣ ಪಾವತಿಸುವಂತೆ ಜಿಲ್ಲಾಧಿಕಾರಿಗಳಾದ ಶ್ರೀಮತಿ ವಿ.ವಿ. ಜ್ಯೋತ್ಸ್ನಾ ಅವರು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಿದರು.
ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರೊಂದಿಗೆ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಳಂದ ತಾಲ್ಲೂಕು ಭೂಸನೂರಿನಲ್ಲಿರುವ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯ ಎಫ್.ಆರ್.ಪಿ. ದರ. ಪ್ರತಿ ಮೆಟ್ರಿಕ್ ಟನ್‍ಗೆ ರೂ.2756, ಅಫಜಲಪೂರ ತಾಲ್ಲೂಕಿನ ಹಾವಳಗಾದ ರೇಣುಕಾ ಸಕ್ಕರೆ ಕಾರ್ಖಾನೆಯ ರೂ. 2853, ಜೇವರ್ಗಿ ತಾಲ್ಲೂಕಿನ ಮಳ್ಳಿ ಗ್ರಾಮದಲ್ಲಿರುವ ಉಗಾರ ಸಕ್ಕರೆ ರೂ.2793 ಹಾಗೂ ಯಾದಗಿರಿ ಜಿಲ್ಲೆಯ ತುಮಕೂರಿನ ಕೋರ್ ಗ್ರೀನ್ ಶುಗರ್ಸ್ ಲಿಮಿಟೆಡ್‍ನ ಎಫ್.ಆರ್.ಪಿ. ದರ ಪ್ರತಿ ಮೆಟ್ರಿಕ್ ಟನ್‍ಗೆ ರೂ. 2734ಯನ್ನು ಸರ್ಕಾರ ನಿಗದಿಪಡಿಸಿದೆ. ಈ ಎಫ್.ಆರ್.ಪಿ. ದರದ ಪ್ರಕಾರವೇ ಕಬ್ಬು ಬೆಳಗಾರರಿಗೆ ಹಣ ಪಾವತಿಸಬೇಕು ಎಂದು ಹೇಳಿದರು.
ಎಫ್.ಆರ್.ಪಿ. ದರದಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಸೇರಿರುತ್ತದೆ. ಹಾಗಾಗಿ ಸಾಗಾಣಿಕೆ ಮತ್ತು ಕಟಾವಣೆ ಮೊತ್ತ ಕಡಿತಗೊಳಿಸಿ ನಿವ್ವಳ ಮೊತ್ತ ಕಬ್ಬು ಮಾರಾಟ ಮಾಡಿದ ಹಣವನ್ನು 15 ದಿನದೊಳಗಾಗಿ ರೈತರಿಗೆ ಪಾವತಿಸಬೇಕು. ಒಂದು ವೇಳೆ 15 ದಿನಗಳಲ್ಲಿ ಪಾವತಿಸದಿದ್ದಲ್ಲಿ ನಂತರದ ಅವಧಿಗೆ ವಾರ್ಷಿಕವಾಗಿ ಶೇಕಡ 15 ಬಡ್ಡಿಯೊಂದಿಗೆ ಪಾವತಿಸಲು ಸರ್ಕಾರದ ಸೂಚನೆಗಳು ಇರುತ್ತವೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.
ಎಫ್.ಆರ್.ಪಿ. ದರದಂತೆ ರೈತರಿಗೆ ಹಣ ಪಾವತಿಸುವ ಕುರಿತು ಪ್ರತಿವಾರ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು, ಕಬ್ಬನ್ನು ಮಾರಾಟ ಮಾಡಲು ಮತ್ತು ಕೊಳ್ಳಲು ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಡಂಬಡಿಕೆ ಮಾಡಿಕೊಳ್ಳುವ ಮಾರ್ಗಸೂಚಿಗಳಂತೆ ದ್ವಿಪಕ್ಷೀಯ ಒಡಂಬಡಿಕೆಯನ್ನು 2018-19ನೇ ಹಂಗಾಮಿನಿಂದಲೇ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದರು.
ರೈತ ಮುಖಂಡರೊಬ್ಬರು ಮಾತನಾಡಿ, ಉತ್ತರ ಕರ್ನಾಟಕ ಭಾಗಕ್ಕೆ ಎಕ್ಸ್ ಪೀಲ್ಡ್ ದರದ ಮೇಲೆ ತಾವುಗಳು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2,500 ರೂಪಾಯಿ ನಿಗದಿಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಾವು ಸರ್ಕಾರದ ಮಾರ್ಗಸೂಚಿ ಅನ್ವಯ ನಡೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಆಹಾರ ಮತ್ತು ನಾಗರಿಕ ಇಲಾಖೆಯ ಉಪನಿರ್ದೇಶಕರಾದ ದತ್ತಪ್ಪ ಕಲ್ಲೂರ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ್ ಪಾಟೀಲ ರಾಜಾಪೂರ, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ದತ್ತಾತ್ರೇಯ ಎಂ. ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿಗಳಾದ ಧರ್ಮರಾಜ ಸಾಹು, ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರಾಧಾಕೃಷ್ಣನ್, ರೇಣುಕಾ ಸಕ್ಕರೆ ಕಾರ್ಖಾನೆ ಅಧಿಕಾರಿ ಸಂಜೀವ ಕುಮಾರ್ ನಾಯಕ್, ಉಗಾರ ಸಕ್ಕರೆ ಕಾರ್ಖಾನೆಯ ಅಧಿಕಾರಿ ಅವಿನಾಶ ಶಿರಗಾಂವಕರ ಕಬ್ಬು ಬೆಳೆಗಾರರ ಸಂಘದ ಎಲ್ಲಾ ತಾಲೂಕಾ ಘಟಕದ ಅಧ್ಯಕ್ಷರು ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.