ಕಬ್ಜ-2 ಪೋಸ್ಟರ್ ಅನಾವರಣ ಶೀಘ್ರ ಚಿತ್ರೀಕರಣ-ಆರ್.ಚಂದ್ರು

•             ಚಿಗೋ ರಮೇಶ್

“ಕಬ್ಜ” ಭಾರತೀಯ ಚಿತ್ರರಂಗವನ್ನು ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಚಿತ್ರ. 25 ದಿನಗಳ ಯಶಸ್ವಿ ಪ್ರದರ್ಶನದ ನಂತರ ಇದೀಗ ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು “ಕಬ್ಜ-2” ಚಿತ್ರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಕನ್ನಡ, ತೆಲುಗು,ತಮಿಳು, ಮಲೆಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕಬ್ಜ-2 ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ಅಖಾಡಕ್ಕೆ ಇಳಿಯುವುದಾಗಿ ಚಂದ್ರು ಘೋಷಿಸಿದ್ದಾರೆ.

ಖಾಲಿ ಕುರ್ಚಿಯ ಪಕ್ಕದಲ್ಲಿ ಬಂದೂಕು ಹಿಡಿದಿರುವ ಪೋಸ್ಟರ್ ಗಮನ ಸೆಳೆದಿದೆ. ಖಾಲಿ ಖುರ್ಚಿಯಲ್ಲಿ ಯಾರು ಕುಳಿತುಕೊಂಡು ಭೂಗತಲೋಕ ಯಾರು ಆಳುತ್ತಾರೆ ಎನ್ನುವುದು ಕಬ್ಜ -2 ಚಿತ್ರದಲ್ಲಿ ಆರ್. ಚಂದ್ರು ಹೇಳ ಹೊರಟಿದ್ದಾರೆ.

“ಕಬ್ಜ”ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಉಪೇಂದ್ರ,ಸುದೀಪ್ ಹೋರಾಟಕ್ಕಿಳಿದ ಸಮಯದಲ್ಲಿ ಶಿವರಾಜ್‍ಕುಮಾರ್ ಎಂಟ್ರಿಯಾಗಿದ್ದು ಕುತೂಹಲದೊಂದಿಗೆ ಚಿತ್ರಕ್ಕೆ ತೆರೆ ಎಳೆಯಲಾಗಿತ್ತು. ಇದೀಗ ಮತ್ತೆ ಅಲ್ಲಿಂದ ಕಥೆ ನಾನಾ ತಿರುವು ಪಡೆದುಕೊಳ್ಳಲಿದೆ ಎಂದಿದ್ಧಾರೆ ನಿರ್ದೇಶಕ,ನಿರ್ಮಾಪಕ ಆರ್.ಚಂದ್ರು.

ಮಾಜಿ ಸಚಿವ ಎಚ್.ಎಂ ರೇವಣ್ಣ ಮತ್ತು ಸಮಾಜಸೇವಕ ರಾಮಚಂದ್ರೇಗೌಡ ಸಮ್ಮುಖದಲ್ಲಿ ಕಬ್ಜ-2 ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಚಂದ್ರು, ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸಲಾಗುವುದು. ಈ ಬಾರಿ ಬೇರೆ ಬೇರೆ ಭಾಷೆಯ ನಟರು ಚಿತ್ರದಲ್ಲಿ ಇರಲಿದ್ದಾರೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಅದ್ದೂರಿಯಾಗಿ ಮೂಡಿಬರಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಕಬ್ಜ-2 ಚಿತ್ರದಲ್ಲಿ ಯಾವ ಯಾವ ಭಾಷೆಯ ಯಾವೆಲ್ಲಾ ನಟರು ಇರಲಿದ್ದಾರೆ ಎನ್ನುವುದನ್ನು ಕಾದುನೋಡಿ, ಈ ಭಾರಿ ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ವಲ್ಡ್ ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ ಚಂದ್ರು.

ತಾಜ್ ಮಹಲ್ ಚಿತ್ರ ಮಾಡುವಾಗ ತಾಯಿಯಿಂದ ನೂರು ರೂಪಾಯಿ ಪಡೆದು ಬಂದ ನಾನು ಇಂದು ನೂರು ಕೋಟಿ ಚಿತ್ರ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದೇನೆ ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದರು ಚಂದ್ರು.

ತಂತ್ರಜ್ಞರ ಸಿನಿಮಾ

ಕಬ್ಜ ಚಿತ್ರ ಮೊದಲೇ ಹೇಳಿದ ಹಾಗೆ ತಂತ್ರಜ್ಞರ ಸಿನಿಮಾ. ಈ ಹಿನ್ನೆಲೆಯಲ್ಲಿ ಚಿತ್ರಕ್ಕಾಗಿ ದುಡಿದವರಿಗೆ ಸಿಹಿ ಹಂಚಿ ಫಲಕ ನೀಡುವ ಮೂಲಕ ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರನ್ನು ಆರ್.ಚಂದ್ರು ಗೌರವಿಸಿದರು.

ಇದೇ ವೇಳೆ ಚಿತ್ರದ 25ನೇ ದಿನದ ಸಂಭ್ರಮವನ್ನು ಚಿತ್ರತಂಡದೊಂದಿಗೆ ಹಂಚಿಕೊಂಡರು. ಈ ವೇಳೆ ಚಂದ್ರು ಕುಟುಂಬ, ಕಲಾವಿದರಾದ ಬಿ.ಸುರೇಶ್, ನಿನಾಸಂ ಅಶ್ವಥ್, ಸಹ ನಿರ್ದೇಶಕರಾದ ಮಂಜುನಾಥ್ ಮೌರ್ಯ, ಶಿವು ಹಿರೇಮಠ್ ಸೇರಿ ಇಡೀ ಚಿತ್ರತಂಡ ಸಂತಸದ ಕ್ಷಣದಲ್ಲಿ ಭಾಗಿಯಾಯಿತು.