ಕಬ್ಜ ಚಿತ್ರೀಕರಣದಲ್ಲಿ ಉಪೇಂದ್ರ ತಲೆಗೆ ಪೆಟ್ಟು

ಬೆಂಗಳೂರು, ಏ.೩- “ಕಬ್ಜ” ಚಿತ್ರದ ಹೊಡೆದಾಟ ಚಿತ್ರೀಕರಣ ಸನ್ನಿವೇಶದಲ್ಲಿ ನಟ ಉಪೇಂದ್ರ ತಲೆಗೆ ರಾಡಿನಿಂದ ಬಲವಾಗಿ ಪೆಟ್ಟು ಬಿದ್ದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಉಪೇಂದ್ರ ಅವರಿಗೆ ರಾಡಿನಿಂದ ತಲೆಗೆ ಏಟು ಬಿದ್ದ ರಭಸಕ್ಕೆ ಕೆಲಕಾಲ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು ತಕ್ಷಣ ಚಿತ್ರತಂಡ ಅಗತ್ಯ ಪ್ರಥಮ ಚಿಕಿತ್ಸೆ ನೀಡಿದೆ.ಹೀಗಾಗಿ ಅವರು ಸಮಸ್ಯೆಯಿಂದ ಪಾರಾಗಿದ್ದಾರೆ.

ನಗರದ ಮಿನರ್ವ ಮಿಲ್ ನಲ್ಲಿ ಕಳೆದ ಮೂವತ್ತು ದಿನಗಳಿಂದ ಕಬ್ಜಾ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಈ ವೇಳೆ ರಾತ್ರಿ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಘಟನೆ ನಡೆದಿದೆ.

ಮಿನರ್ವ ಮಿಲ್ ನಲ್ಲಿ ಆಯಿಲ್ ಮಾರ್ಕೆಟ್ ಸೆಟ್ ನಿರ್ಮಾಣ ಮಾಡಿ ಸಾಹಸ ನಿರ್ದೇಶಕ ರವಿವರ್ಮ ಮಾರ್ಗದರ್ಶನದಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು.

ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮತ್ತು ನಿರ್ಮಾಪಕ ಆರ್ ಚಂದ್ರು ಅವರು, ಹೊಡೆದಾಟದ ಸನ್ನಿವೇಶದ ಸಮಯದಲ್ಲಿ ಉಪೇಂದ್ರ ಅವರ ತಲೆಗೆ ರಾಡಿನಿಂದ ಅಚಾನಕ್ಕಾಗಿ ಪೆಟ್ಟುಬಿತ್ತು ಕೂಡಲೇ ಅವರು ಕೆಲಕಾಲ ಸ್ಥಳದಲ್ಲಿ ಕುಳಿತು ವಿಶ್ರಾಂತಿ ಪಡೆದರು ಅಗತ್ಯ ಪ್ರಥಮ ಚಿಕಿತ್ಸೆ ಸ್ಥಳದಲ್ಲಿ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಪೇಂದ್ರ ಅವರ ತಲೆಗೆ ಏಟು ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಮತ್ತೆ ಅವರು ಸುಧಾರಿಸಿಕೊಂಡು ಸಹಜಸ್ಥಿತಿಗೆ ಬಂದರಂತೆ ಚಿತ್ರೀಕರಣವನ್ನು ಮುಂದುವರಿಸಲಾಗಿದೆ. ಉಪೇಂದ್ರ ಅವರು ಈಗ ಆರಾಮಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ನಿರ್ದೇಶನ ಮತ್ತು ನಿರ್ಮಾಣ ಮಾಡಲಾಗುತ್ತಿದ್ದು ಎಂಬತ್ತರ ಕಾಲಘಟ್ಟದ ರೌಡಿಸಂ ಭೂಗತಲೋಕದ ಕಥಾಹಂದರವನ್ನು ಮುಂದಿಟ್ಟುಕೊಂಡು ಆರ್ಚಂದ್ರು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಈ ಚಿತ್ರದಲ್ಲಿ ಹಲವು ಹಿರಿಯ ಕಿರಿಯ ನಾಯಕರ ದೊಡ್ಡ ಬಳಗವೇ ಇದೆ