‘ಕಬ್ಜ’ ಒಂದೇ ದಿನ ೫೪ ಕೋಟಿ ಕಲೆಕ್ಷನ್


ಬೆಂಗಳೂರು,ಮಾ.೧೮- ಪ್ಯಾನ್ ಇಂಡಿಯಾ ಚಿತ್ರ ” ಕಬ್ಜ ” ಬಿಡುಗಡೆಯಾದ ಮೊದಲ ದಿನವೇ ೫೪ ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಣೆ ಮಾಡುವ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಾಖಲೆ ಬರೆದಿದೆ.
“ಕೆ ಜಿ ಎಫ್, ” ಕಾಂತಾರ ” ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ” ಚಿತ್ರ ಮೊದಲ ದಿನದ ಗಳಿಕೆಗೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದೆ.
ಬಿಡುಗಡೆಯಾದ ಮೊದಲ ದಿನವೇ ಭಾರತಾದ್ಯಂತ ೫೪ ಕೋಟಿಗೂ ಹೆಚ್ಚು ’ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕನ್ನಡದ ಚಿತ್ರವೊಂದು ಮೊದಲದಿನವೇ ೫೪ ಕೋಟಿಗೂ ಹೆಚ್ಚು ಹಣ ಮಾಡಿದೆ. ಎರಡನೇ ದಿನವೂ ಸುಮಾರು ೫೦ ಕೋಟಿ ರೂಪಾಯಿ ಸಂಗ್ರಹವಾಗಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಅಂದಾಜು ಮಾಡಿದ್ದಾರೆ.
ಇಂದು ೫೦ ಕೋಟಿ ಕಲೆಕ್ಷನ್ ನಿರೀಕ್ಷೆ:.
ದೇಶಾದ್ಯಂತ ಎರಡನೇ ದಿನವೇ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ಮಾತು ಕೇಳಿ ಬರುತ್ತಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ವಿವಿಧ ಭಾಷೆಗಳಲ್ಲಿ ಜನರು ಚಿತ್ರ ವೀಕ್ಷಣೆಗೆ ಮುಗಿಬಿದ್ದಿದ್ದಾರೆ. ಅಲ್ಲದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಯಲ್ಲಿ ಯಾವುದೇ ಪ್ಯಾನ್ ಇಂಡಿಯಾ ಚಿತ್ರ ಇಲ್ಲದಿರುವುದು ಕಬ್ಜ ತಂಡಕ್ಕೆ ವರದಾನವಾಗಿ ಪರಿಣಮಿಸಿದೆ.ಭಾರತದಾಚೆಗೂ “ಕಬ್ಜ” ಸಿನಿಮಾ ಬಿಡುಗಡೆಯಾಗಿದ್ದು, ವಿದೇಶಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆರ್ ಚಂದ್ರು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿದ್ದಾರೆ.
ಕಬ್ಜ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿರುವುದು ನಿರ್ಮಾಪಕ,ನಿರ್ದೇಶಕ ಆರ್.ಚಂದ್ರು ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮೊದಲ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್
ಕರ್ನಾಟಕ – ೨೦ ಕೋಟಿ ರೂ
ಹಿಂದಿ – ೧೨ ಕೋಟಿ ರೂ
ತೆಲುಗು – ೦೭ ಕೋಟಿ ರೂ
ತಮಿಳು – ೦೫ ಕೋಟಿ ರೂ
ಮಲೆಯಾಳಂ – ೦೩ ಕೋಟಿ ರೂ
ಇತರೆ ದೇಶಗಳಲ್ಲಿ – ೦೮ ಕೋಟಿ ರೂ ಸೇರಿದಂತೆ ಮೊದಲ ದಿನವೇ ೫೪ ಕೋಟಿ ಸಂಗ್ರಹ ಮಾಡಿದೆ.