ಕಬಿನಿ, ತುಂಗಾ ಜಲಾಶಯ ಭರ್ತಿ, ಕೊಡಗಿನಲ್ಲಿ ಪ್ರವಾಹದ ಭೀತಿ

ಮೈಸೂರು, ಜು. ೧೩- ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿಯಾಗಿದ್ದು, ನಾಲ್ಕು ಗೇಟ್‌ಗಳ ಮೂಲಕ ೩೮ ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ಅಡಿ ಭರ್ತಿ ಮಾಡದೆ ಹೊರಹರಿವು ಹೆಚ್ಚಳ ಮಾಡಲಾಗಿದೆ. ಜಲಾಶಯದ ಸುರಕ್ಷತೆಯ ಕಾರಣಕ್ಕಾಗಿ ನೀರಿನ ಒಳಹರಿವು ಕಡಿಮೆಯಾಗುವ ತನಕ ೨ ಅಡಿ ಬಾಕಿ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ಬಿಡಲಾಗುತ್ತಿರುವ ನೀರು ನಂಜನಗೂಡು ಮೂಲಕ, ಟೀ ನರಸೀಪುರದ ಸಂಗಮ ಸೇರಿದಂತೆ ಅಲ್ಲಿಂದ ಗಗನಚುಕ್ಕಿ ತಲುಪಿ ತಮಿಳುನಾಡಿಗೆ ಸೇರಲಿದೆ.
ಜಲಾಶಯದಿಂದ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಹಲವು ಸೇತುವೆಗಳು ಮುಳುಗಡೆಯಾಗಿದೆ. ಬಿದರಹಳ್ಳಿ, ಎನ್. ಬೇಗೂರು, ಪಂಚಾಯತಿ ವ್ಯಾಪ್ತಿಯ ೫೦ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಸಂಪರ್ಕ ಬಂದ್ ಆಗಿದೆ.
ಈ ಮಧ್ಯೆ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಠಿಯಾಗಿದೆ. ಶಾಲೆ, ಮನೆಗಳ ಗೋಡೆಗಳು ಸೇರಿದಂತೆ ಬೆಟ್ಟ, ಗುಡ್ಡ ಕುಸಿಯುತ್ತಿದ್ದು ಸ್ಥಳೀಯರಿಗೆ ಆತಂಕ ಎದುರಾಗಿದೆ. ಮಳೆಯಿಂದಾಗಿ ಹಾರಂಗಿ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. ಜಲಾಶಯಕ್ಕೆ ೧೫ ಸಾವಿರ ಕ್ಯೂಸೆಕ್ ಬರುತ್ತಿದೆ.
ಜಿಲ್ಲೆಯ ನದಿ ತೊರೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರದ ಪ್ರವಾಹದ ಭೀತಿಗೆ ಸಿಲುಕಿದ್ದು, ಊರು ಖಾಲಿ ಮಾಡುತ್ತಿದ್ದಾರೆ. ಕುಶಾಲನಗರದ ಕುವೆಂಪು ಹಾಗೂ ಸಾಯಿಶಂಕರ ಬಡಾವಣೆಗಳ ನೀರು ನುಗ್ಗುವ ಪರಿಸ್ಥಿತಿ ಎದುರಾಗಿದ್ದು ಜನ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.
ಪ್ರತಿ ಮಳೆಗಾಲದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದುವರೆಗೂ ಶಾಶ್ವತ ಪರಿಹಾರವನ್ನು ಸರ್ಕಾರ ಕೈಗೊಂಡಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದೇ ವೇಳೆ ವಿಜಯನಗರ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಇತಿಹಾಸ ಪ್ರಸಿದ್ಧ ಹಂಪಿ ಸ್ಮಾರಕಗಳು ಮುಳುಗುವ ಭೀತಿ ಎದುರಾಗಿದೆ.
ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲದ ಸೇತುವೆ, ರಾಮಕ್ಷ್ಮಣ ಸೇತುವೆ, ಚಕ್ರತೀರ್ಥ ಘಟ್ಟ, ತುಂಗಭದ್ರಾ ನದಿ ಪಾತ್ರಕ್ಕೆ ಹೊಂದಿಕೊಂಡಿವೆ. ಜಲಾಶಯದ ಒಟ್ಟು ೩೩ ಕ್ರೆಸ್ಟ್ ಗೇಟ್‌ಗಳ ಪೈಕಿ ೨೮ ಗೇಟ್‌ಗಳಿಂದ ೮೦ ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
೧೦೫.೭೮೮ ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿಯಾಗಿದೆ. ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಒಳಹರಿವಿದೆ. ಒಂದೂವರೆ ಲಕ್ಷ ಕ್ಯೂಸೆಕ್ ನೀರು ಯಾವುದೇ ಕ್ಷಣದಲ್ಲೂ ಬಿಡುವ ಸಾಧ್ಯತೆಯಿದ್ದು, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ೧೫ ಗೇಟ್ ಗಳ ಮೂಲಕ ನೀರು ಕೃಷ್ಣಾ ನದಿಗೆ ನೀರು ಹರಿಸಲಾಗಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾದರೆ ಬಸವಸಾಗರಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.
ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣದಲ್ಲಿ ಹೆಚ್ಚಳವಾದರೆ ಶಹಾಪುರ ತಾಲ್ಲೂಕಿನ ಕೊಲ್ಲೂರು ಸೇತುವೆ ಮುಳುಗಡೆಯಾಗುವ ಭೀತಿಯಾಗಿದೆ. ಜಿಲ್ಲೆಯಾದ್ಯಂತ ಇಂದು ಕೂಡ ಜಿಟಿ, ಜಿಟಿ ಮಳೆಯಾಗುತ್ತಿದ್ದು, ೧೦ ಮನೆಗಳು ಹಾನಿಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.