ಕಬಿನಿ ಜಲಾಶಯದಿಂದ 33 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ

ಮೈಸೂರು.ಜು.18:- ಹೆಚ್.ಡಿ.ಕೋಟೆಯ ಕಬಿನಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ತುಂಬಿರುವ ಕಬಿನಿ ಜಲಾಶಯದಿಂದ 33,313 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕಬಿನಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದ್ದು, ನಿರಂತರ ಮಳೆಯಿಂದಾಗಿ ರೈತರ ಸಂಕಷ್ಟಕ್ಕೀಡಾಗಿದ್ದು, ಮಳೆ ಹೆಚ್ಚಾದರೆ ಮತ್ತೆ ಪ್ರವಾಹ ಭೀತಿ ಶುರುವಾಗಲಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಶುರುವಾಗಿದೆ.
ಕೇರಳದ ವೈನಾಡುವಿನಲ್ಲಿ ಸುರಿದ ಧಾರಾಕಾರ ಮಳೆಗೆ ಕಬಿನಿ ಅಣೆಕಟ್ಟು ಭರ್ತಿಯಾಗಿದ್ದು, ಒಳ ಹರಿವಿನ ಪ್ರಮಾಣ ಹೆಚ್ಚುತ್ತಿಗಿದೆ. ಜಲಾಶಯಕ್ಕೆ 33,630 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 2282.56 ಅಡಿ ಇದೆ.
ಕಬಿನಿ ಭರ್ತಿಯತ್ತ ಸಾಗಿದ್ದು, ನಂಜನಗೂಡಿನ ಕಪಿಲಾ ಸ್ನಾನ ಘಟ್ಟ, ಮಂಟಪ ಜಲಾವೃತವಾಗಿದೆ ನಂಜನಗೂಡಿನಲ್ಲಿ ಶ್ರೀಪರಶುರಾಮ ದೇವಸ್ಥಾನ ಭಾಗಶಃ ಮುಳುಗಡೆಯಾಗಿದ್ದು, ಪಟ್ಟಣದಲ್ಲಿನ ನದಿ ಸಮೀಪದ ಬಡಾವಣೆಗಳು, ಜಮೀನುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ.