ಕಬಡ್ಡಿ ಸಲಗನ ರೀತಿ ಆಡಬೇಕು: ನಟ ವಿಜಯ್

ಚಿಕ್ಕನಾಯಕನಹಳ್ಳಿ, ಡಿ. ೪- ಕಬ್ಬಡ್ಡಿ ಎಂದರೇ ಸಲಗನ ಆಟ. ಒಮ್ಮೆ ಕಬ್ಬಡ್ಡಿಯಲ್ಲಿ ಒಳ ಹೋದರೆ ಸಲಗನ ರೀತಿ ನುಗ್ಗಿ ಆಡಿ ಬರಬೇಕು ಎಂದು ಚಲನಚಿತ್ರ ನಟ ದುನಿಯಾ ವಿಜಯ್ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಲಕ್ಷ ದೀಪೋತ್ಸವದ ಅಂಗವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘದ ವತಿಯಿಂದ ನಡೆದ ಜಗೋಸಿರಾ ಕಪ್ ಕಬ್ಬಡ್ಡಿ ಪಂದ್ಯಾವಳಿಯ ರಾಜ್ಯಮಟ್ಟದ ಪುರುಷ ಮತ್ತು ಮಹಿಳಾ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಪ್ರಮಾಣದಲ್ಲಿ ಆರಂಭವಾದ ಕಬಡ್ಡಿ ಪಂದ್ಯಾವಳಿ ಇಂದು ದೊಡ್ಡಮಟ್ಟಕ್ಕೆ ಬೆಳೆದಿದೆ. ಕಬಡ್ಡಿ ಆಡುವ ಆಟಗಾರರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳೆಯಲಿ ಎಂದು ಆಶಿಸಿದರು.
ಬೆಂಗಳೂರು ಸಹಕಾರ ಇಲಾಖೆಯ ನಿರ್ದೇಶಕ ಆದರ್ಶಕುಮಾರ್ ಮಾತನಾಡಿ, ಜೀನಿ ಸಂಸ್ಥೆಯವರು ಗೋಡೆಕೆರೆಯಲ್ಲಿ ನಡೆಯುವ ಕಬಡ್ಡಿ ಕ್ರೀಡೆಗೆ ಪ್ರಾಯೋಜಕರಾಗಿದ್ದು, ಮುಂದೆ ನಡೆಯುವ ಕಬಡ್ಡಿ ಪಂದ್ಯಾವಳಿಗೂ ಅವರೇ ಪ್ರಾಯೋಜಕರಾಗುತ್ತಿದ್ದಾರೆ ಎಂದರು.
ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, ಗೋಡೆಕೆರೆ ಮಣ್ಣಿನಲ್ಲಿ ಶರಣರ ತತ್ವ, ಆದರ್ಶವಿದೆ. ಇಲ್ಲಿನ ಕಬಡ್ಡಿ ಪಂದ್ಯಾವಳಿ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದೆ. ಹಾಗಾಗಿ ಆಯೋಜಕರು ಮುಂದೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸಬೇಕು ಎಂದು ಸಲಹೆ ನೀಡಿದರು.
ಕಬಡ್ಡಿ ವಿಜೇತ ತಂಡ
ಪುರುಷ ತಂಡದಲ್ಲಿ ಪ್ರಥಮ ಬಹುಮಾನ ಆಳ್ವಾಸ್ ತಂಡ ಪ್ರಥಮ ಬಹುಮಾನ ೪೦ ಸಾವಿರ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಶ್ರೀ ಧರ್ಮಸ್ಥಳ ಕ್ರೀಡಾಕೂಟ ಉಜಿರೆ, ೨೦ ಸಾವಿರ ಹಾಗೂ ಟ್ರೋಫಿ, ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ ೧೦ ಸಾವಿರ.
ಮಹಿಳಾ ಕ್ರೀಡಾ ಕೂಟ ತಂಡ
ಪ್ರಥಮ ಬಹುಮಾನ ಮೂಡಬಿದರೆ ಆಳ್ವಾಸ್ ಶಾಲೆಗೆ, ದ್ವಿತೀಯ ಬಹುಮಾನ ಎಸ್‌ಡಿಎಂ ಶಾಲೆ ಉಜಿರೆ, ಮೂರನೇ ಬಹುಮಾನ ಮೈಸೂರು ವಿದ್ಯಾವಿಕಾಸ ತಂಡ.
ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತ ಪುರುಷರು ಮತ್ತು ಮಹಿಳೆಯರ ಒಟ್ಟು ೭೨ ತಂಡಗಳು ಭಾಗವಹಿಸಿದ್ದವು.