
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.12: 2023-2024ನೇ ಸಾಲಿನ ತೆಕ್ಕಲಕೋಟೆ ಹೋಬಳಿ ಮಟ್ಟದ ಬಾಲಕಿಯರ ಅಂತಿಮ ಕಬಡ್ಡಿ ಕ್ರೀಡೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ಟಾಸ್ ಹಾಕುವುದರ ಮೂಲಕ ಚಾಲನೆ ನೀಡಿದರು.
ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ತುಂಬಾ ಸಹಕಾರಿಯಾಗಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳು ಸಕಾರಾತ್ಮಕ ರೀತಿಯಲ್ಲಿ ಪಾಲ್ಗೊಳ್ಳಬೇಕು. ಇಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ, ನಿರ್ಣಾಯಕರು ಕೂಡ ನಿಷ್ಪಕ್ಷಪಾತವಾಗಿ ನಿರ್ಣಯ ನೀಡುವ ಮೂಲಕ ಉತ್ತಮ ಪ್ರತಿಭೆಗಳು ಹೊರಹೊಮ್ಮುವಂತೆ ಮಾಡಿ ಎಂದು ತಿಳಿಸಿದರು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಕನಕ ಶ್ರೀ ವಿದ್ಯಾನಿಕೇತನ ಇಂಗ್ಲೀಷ್ ಮಾದ್ಯಮ ಮತ್ತು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ, ಜರುಗಿದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಅಂತಿಮ ಪಂದ್ಯದಲ್ಲಿ ಪಟ್ಟಣದ ಬಾಲಕಿಯರ ಕಸ್ತೂರಿ ಬಾ ಶಾಲೆ ಮತ್ತು ಉಪ್ಪರಹೊಸಳ್ಳಿ ಗ್ರಾಮದ ರಾಷ್ಟ್ರೀಯ ವಿದ್ಯಾನಿಕೇತನ ಶಾಲೆ ಸೆಣಸಾಡಿದವು. ಅಂತಿಮವಾಗಿ ಉಪ್ಪಾರ ಹೊಸಳ್ಳಿ ಗ್ರಾಮದ ರಾಷ್ಟ್ರೀಯ ವಿದ್ಯಾನಿಕೇತನ ಶಾಲೆಯ ಬಾಲಕಿಯರು ಜಯ ಪಡೆದರು.
ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ವಿದ್ಯಾರ್ಥಿಗಳಿಗೆ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಂಡದ ಆಟಗಾರರ ಪಾತ್ರವನ್ನು ಹಾಗೂ ನಾಯಕತ್ವ ಪಾತ್ರವನ್ನು ಅವರವರ ಅನುಭವದ ಮೇಲೆ ನಿರ್ವಹಿಸುತ್ತಾರೆ. ಇಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಕ್ಷೇತ್ರ ಸಮನ್ವಯ ಅಧಿಕಾರಿ ತಮ್ಮನಗೌಡ ಪಾಟೇಲ್ ಹೇಳಿದರು.
ತೆಕ್ಕಲಕೋಟೆ ಕ್ಲಸ್ಟರ್ ನ ಸಿ.ಆರ್.ಪಿ ಮಹಮ್ಮದ್ ಫಯಾಜ್ , ಬಳ್ಳಾರಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಚನ್ನಪ್ಪ, ದೈಹಿಕ ಶಿಕ್ಷಕರಾದ ರಮೇಶ್, ಉಪೇಂದ್ರ, ಉಸ್ಮನ್, ಖಾದರ್ ಭಾಷ, ರಾಂಮೂರ್ತಿ, ಕಿರಣ್ ಕುಮಾರ್, ದಾನಪ್ಪ, ಮಲ್ಲಿಕಾರ್ಜುನ, ಮೈರುನ್ ಬೀ ಇದ್ದರು.