ಕಫ್ರ್ಯೂ ಮಾರ್ಗಸೂಚಿ ಯಥಾವತ್ತಾಗಿ ಅನುಷ್ಠಾಗೊಳಿಸಲು ಕ್ರಮ – ಜಿಲ್ಲಾಧಿಕಾರಿ


ಧಾರವಾಡ, ಏ.28: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಚೈನ್‍ಲಿಂಕ್‍ನ್ನು ಕಟ್ ಮಾಡಲು ಹಾಗೂ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ರಾಜ್ಯಸರ್ಕಾರವು ಏ.27 ರಿಂದ ಘೋಷಿಸಿರುವ ಜನತಾ ಕಫ್ರ್ಯೂವನ್ನು ಸೂಚಿಸಿರುವ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗುವದೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಬೆಡ್ ಕೊರತೆ ಇಲ್ಲ, ಧಾರವಾಡ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡದಲ್ಲಿ 125 ಬೆಡ್‍ಗಳನ್ನು ಹಾಗೂ ಕಿಮ್ಸ್ ಆವರಣದ ತಾಯಿ ಮಕ್ಕಳ ಆಸ್ಪತ್ರೆ 100 ಹಾಗೂ ಕಿಮ್ಸ್ ಕಟ್ಟಡದಲ್ಲಿ 175 ಬೆಡ್‍ಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 2,25,278 ಜನರಿಗೆ ಹಾಗೂ 13,680 ಜನರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಹೋಟೆಲ್, ರೆಸ್ಟೊರೆಂಟ್ ತೆರೆಯಲು ಅವಕಾಶವಿದ್ದು, ಪಾರ್ಸೆಲ್ ನೀಡಲು ಮಾತ್ರ ಅನುಮತಿ ನೀಡಲಾಗಿದ್ದು, ಸಾಧ್ಯವಾದಷ್ಟು ಹೋಂ ಡೆಲಿವರಿ ಮಾಡಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನೇ ಜಿಲ್ಲಾಡಳಿತ ಪಾಲಿಸುತ್ತಿದ್ದು, ಜಿಲ್ಲಾಡಳಿತದಿಂದ ಪ್ರತ್ಯೇಕವಾಗಿ ಯಾವುದೇ ಹೆಚ್ಚಿನ ಮಾರ್ಗಸೂಚಿಗಳನ್ನು ಅಳವಡಿಸಲಾಗಿಲ್ಲ ಎಂದು ಅವರು ಹೇಳಿದರು.
ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಪಾಸ್‍ಗಳನ್ನು ವಿತರಿಸುವುದಿಲ್ಲ. ಕಟ್ಟಡ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರು ತಮ್ಮ ಸಂಸ್ಥೆಯ ಅಧಿಕೃತ ಪಾಸ್ ಅಥವಾ ಗುರುತಿನ ಪತ್ರ ಧರಿಸಿರಬೇಕು. ಸಂಚರಿಸುವವರನ್ನು ಸಂಬಂಧಿಸಿದ ಅಧಿಕಾರಿಗಳು ತಪಾಸಣೆ ಮಾಡಿದಾಗ ಸಮರ್ಪಕ ದಾಖಲೆ ಹಾಗೂ ಸಮಂಜಸವಾದ ಉತ್ತರ ನೀಡಿ ಅನುಮತಿ ಪಡೆಯಬೇಕು. ಸರ್ಕಾರ ನೀಡಿರುವ ನಿರ್ದೇಶನ ಹಾಗೂ ಮಾರ್ಗಸೂಚಿಗಳ ಆಧಾರದ ಮೇಲೆ ಮಹಾನಗರ ವ್ಯಾಪ್ತಿಯಲ್ಲಿ ಅನಗತ್ಯ ಸಂಚಾರ, ನಿರ್ಬಂಧಿಸಿದ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಾರ್ಗಸೂಚಿಯಲ್ಲಿ ಸರ್ಕಾರವು ತಿಳಿಸಿರುವ ಕಾಮಗಾರಿಗಳಿಗೆ ಹೋಗುವವರು ಸಂಬಂಧಿಸಿದ ಕೆಲಸ ಅಥವಾ ಏಜೆನ್ಸಿಯ ಪಾಸ್ ಹೊಂದಿರುವುದು ಕಡ್ಡಾಯ ಎಂದು ಅವರು ಹೇಳಿದರು.
ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ಸಿಟಿಸ್ಕ್ಯಾನ್ ಉಚಿತವಾಗಿ ಮಾಡಲಾಗುತ್ತಿದೆ. ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತುರ್ತು ವಾಹನಗಳಿಗೆ ಅವಶ್ಯಕ ದಾಖಲೆ ನೋಡಿ ಪರವಾನಿಗೆ ನೀಡಲಾಗುವುದು. ರೈಲ್ವೆ, ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಪರವಾನಿಗೆ ಮೂಲಕ ಸಂಚರಿಸಲು ಅನುಮತಿ ನೀಡಲಾಗುವುದು. ಕಟ್ಟಡ ಕಾಮಗಾರಿ, ಕೈಗಾರಿಕೆಗಳು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಕಾರ್ಯ ನಿರ್ವಹಿಸಬಹುದು. ಮದುವೆಗೆ ಗರಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅದಕ್ಕಾಗಿ ಜಿಲ್ಲಾಡಳಿತದಿಂದ ಪಾಸ್ ನೀಡಲಾಗುತ್ತಿದೆ. ಧಾರವಾಡದ ಟಾಟಾ ಹಿಟಾಚಿ ಕಂಪನಿಯಿಂದ ಹತ್ತುಲಕ್ಷ ರೂ.ಗಳ ಸಿಎಸ್‍ಆರ್ ನಿಧಿಯಲ್ಲಿ ಸುಮಾರು 100 ಹಾಸಿಗೆಗಳನ್ನು ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಅವರು ಸುಮಾರು 25ಲಕ್ಷ ರೂ.ಗಳ ಸಿಎಸ್‍ಆರ್ ನಿಧಿಯಲ್ಲಿ ಅಗತ್ಯವಿರುವ ಹಾಸಿಗೆಗಳನ್ನು ಕಿಮ್ಸ್ ಹಾಗೂ ಜಿಲ್ಲಾಸ್ಪತ್ರೆಗೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾರ್ವಜನಿಕರೊಂದಿಗೆ ವರ್ಚುವಲ್ ಸಭೆ : ಮಾಧ್ಯಮ ಪ್ರತಿನಿಧಿಗಳೊಂದಿಗೆ ವರ್ಚುವಲ್ ಸಭೆ ಜರುಗಿಸಿದ ನಂತರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡ ಅವರು ಜಿಲ್ಲೆಯ ಸಾರ್ವಜನಿಕರೊಂದಿಗೆ ವರ್ಚುವಲ್ ಸಭೆ ಜರುಗಿಸಿ ಕಫ್ರ್ಯೂ ಜಾರಿ ಅವಧಿಯಲ್ಲಿ ಅನುಮತಿಸಲಾಗುವ ಮತ್ತು ನಿರ್ಬಂಧಿಸಲಾಗಿರುವ ಕಾರ್ಯಚಟುವಟಿಕೆಗಳ ಕುರಿತು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.