
ವಿಜಯಪುರ :ಮೇ.26: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ 100 ದಿನಗಳಲ್ಲಿ ಕಪ್ಪು ಹಣ ತರುವುದಾಗಿ ಭರವಸೆ ನೀಡಿದ್ದರು, ಆದರೆ ದಶಕ ಕಳೆದರೂ ಸಹ ಈ ಮಾತು ಅವರಿಗೆ ನೆನಪಿಲ್ಲ, ಈ ಬಗ್ಗೆ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಹೇಳುವಲ್ಲಿ ನರೇಂದ್ರ ಮೋದಿ ಅವರಿಗೆ ಡಾಕ್ಟರೇಟ್ ಪದವಿ ಕೊಡಬೇಕು, ಕೊರೊನಾ ಸಂದರ್ಭದಲ್ಲಿ ವಿಶೇಷ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಲ್ಲಿ ಖರ್ಚಾಗಿದೆ, ಯಾವ ರೀತಿ ಅದನ್ನು ವಿನಿಯೋಗಿಸಲಾಗಿದೆ ಎಂಬ ಯಾವ ಮಾಹಿತಿಯನ್ನೂ ಕೇಂದ್ರ ಸರ್ಕಾರ ನೀಡಿಲ್ಲ, ಈ ಬಗ್ಗೆಯೂ ಯಾರು ಚಕಾರವೆತ್ತುತ್ತಿಲ್ಲ, ಅಣ್ಣಾ ಹಜಾರೆ, ಬಾಬಾ ರಾಮದೇವ್ ಸಹ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ. ಕಪ್ಪು ಹಣದ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದ ಬಾಬಾ ರಾಮದೇವ ಈಗ ಮೌನಿಯಾಗಿದ್ದಾರೆ, ಅಣ್ಣಾ ಹಜಾರೆ ಮನೆಯಲ್ಲಿ ಮಲಗಿದ್ದಾರೆ ಎಂದರು.
ಬಿಜೆಪಿಯ ನದಿಗಳ ಜೋಡಣೆ ಮಹಾತ್ವಾಕಾಂಕ್ಷೆಯ ಯೋಜನೆ ಆರಂಭವಾಗಲೇ ಇಲ್ಲ, ನದಿ ಜೋಡಣೆ ಶಬ್ದವನ್ನೇ ಬಿಜೆಪಿ ಕೇಂದ್ರ ನಾಯಕರು ಪ್ರಯೋಗಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಅದೇ ತೆರನಾಗಿ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದಲ್ಲಿ ಪ್ರತಿಯೊಬ್ಬರಿಗೂ ಸೂರು ಎಂದು ಪ್ರಧಾನಿ ಹೇಳಿದ್ದರು. ಆದರೆ ಈ ಬಗ್ಗೆ ಜೆಡಿಎಸ್, ಬಿಜೆಪಿ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದರು.
ಹೊಸ ನೋಟುಗಳನ್ನೇ ಈಗ ವಾಪಾಸ್ಸು ಪಡೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ, ರೈತರ ಆದಾಯ ದ್ವಿಗುಣ ಮಾಡುವ ಮಾತು ಬಿಜೆಪಿ ನಾಯಕರಿಗೆ ಈಗ ನೆನಪಿಲ್ಲವೇ? ಎಂದರು.
ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು, ನಿಯಮಾವಳಿ ರೂಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಆದರೆ ಜೆಡಿಎಸ್, ಬಿಜೆಪಿ ಪಕ್ಷಗಳು ತರಾತುರಿಯಲ್ಲಿ ಗ್ಯಾರಂಟಿ ಈಡೇರಿಸುತ್ತಿಲ್ಲ ಎಂದು ವಿನಾಕಾರಣ ಒತ್ತಡ ತರುವ ಕೆಲಸ ಮಾಡುತ್ತಿವೆ.
ಸರ್ಕಾರ ಈಗತಾನೇ ರಚನೆಯಾಗಿದ್ದು, ಖಾತೆ ಹಂಚಿಕೆ ಸಹ ಆಗಿಲ್ಲ, ಸಾರ್ವಜನಿಕರಿಗೂ ಸಹ ಈ ವಿಷಯ ಬಗ್ಗೆ ಅರಿವಿದೆ. ಆದರೆ ವಿನಾಕಾರಣ ರಾಜಕೀಯ ಪಕ್ಷಗಳು ಗ್ಯಾರಂಟಿ ವಿಷಯವಾಗಿ ರಾಜಕಾರಣ ಮಾಡುತ್ತಿವೆ, ಈ ಹಿಂದೆ ಚುನಾವಣೆ ಸಂಧರ್ಭದಲ್ಲಿ ಈ ಗ್ಯಾರಂಟಿಗಳನ್ನು ಘೋಷಿಸಿದವರೆ ಆ ಗ್ಯಾರಂಟಿ ಅನುಷ್ಠಾನಕ್ಕೆ ಅಜೆರ್ಂಟ್ ಮಾಡುತ್ತಿದ್ದಾರೆ, ಚುನಾವಣೆಯ ಭಯಂಕರ ಸೋಲಿನ ಹತಾಶೆಯಿಂದಾಗಿ ಈ ರೀತಿ ಗೊಂದಲ ಸೃಷ್ಟಿಸುತ್ತಿವೆ ಎಂದರು.
ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.