ಕಪ್ಪು ಬಾವುಟ ಹಿಡಿದು ರೈತರಿಂದ ಕರಾಳ ದಿನ ಆಚರಣೆ

ಮೈಸೂರು,ಮೇ.26:- ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳು ಸಂದಿದ್ದು ಇದರ ಅಂಗವಾಗಿ ಇಂದು ರೈತರು ಕರಾಳ ದಿನವನ್ನು ಆಚರಿಸುತ್ತಿದ್ದಾರೆ.
ಆರು ತಿಂಗಳು ಕಳೆದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೆ ಕಾರಣ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದು, ಮೈಸೂರಿನಲ್ಲಿಯೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ಉದ್ಯಮಿಗಳಿಗೆ ನೆರವು ನೀಡುತ್ತಿವೆ ಎಂದು ರೈತರು ಆರೋಪಿಸಿದ್ದು, ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ. ಇದೇ ವೇಳೆ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಖಾತರಿಪಡಿಸುವಂತೆ ಒತ್ತಾಯಿಸಿದ್ದಾರೆ. ಮೈಸೂರು ನಗರದ ವಿವಿಧೆಡೆ ರೈತ ಮುಖಂಡರು ಪ್ರತಿಭಟನೆ ನಡೆಸಿದ್ದು, ನಗರದ ಕೆಲವು ಬಡಾವಣೆಗಳಲ್ಲಿ ನಾಗರಿಕರು ತಮ್ಮ ತಮ್ಮ ಮನೆಯ ಮುಂದೆಯೇ ನಿಂತು ಕಪ್ಪು ಬಾವುಟ ಹಿಡಿದು ರೈತರಿಗೆ ಬೆಂಬಲ ನೀಡಿದ್ದಾರೆ.
ಮೈಸೂರು ತಾಲೂಕಿನ ಕೋಚನಹಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಯಿತು, ಹೊಸಕೊಟೆ ಬಸವರಾಜು, ಪಿ.ಮರಂಕಯ್ಯ, ಬಕ್ಕಳ್ಳಿನಂಜುಂಡಸ್ವಾಮಿ, ಮಂಡಕಳ್ಳಿ ಮಹೇಶ, ಗೋವಿಂದರಾಜು, ದೇವಣ್ಣ ಇತರರು ಭಾಗವಹಿಸಿದ್ದರು.