ಕಪ್ಪು ಬಣ್ಣದ ಮಹತ್ವ ಸಾರುವ ಎಚ್ಚರಿಕೆ

ಕೆ.ಆರ್.ಪೇಟೆ:ಏ:07: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವ ಶಾಸಕ ಜಮೀರ್ ಅಹಮದ್ ಖಾನ್ ಅವರು ಮಂಡ್ಯ ಜಿಲ್ಲೆಗೆ ಆಗಮಿಸಿದರೆ ಅವರಿಗೆ ಕಪ್ಪು ಮಸಿ ಬಳಿದು ಕಪ್ಪು ಬಣ್ಣದ ಮಹತ್ವವನ್ನು ಸಾರುವುದಾಗಿ ತಾಲೂಕು ಜೆಡಿಎಸ್ ಮುಖಂಡರು ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋ ಷ್ಠಿಯಲ್ಲಿ ಮಾತನಾಡಿದ ಜಿಪಂ ಸದಸ್ಯ ಹಾಗೂ ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಜಮೀರ್ ಅಹಮದ್ ಖಾನ್ ಅವರ ಹೇಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಜಮೀರ್ ಅಹಮದ್ ಕೇವಲ ಒಬ್ಬ ಶಾಸಕ. ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿಯವರ ಬಾಲಂಗೂಚಿಯಂತೆ ತಿರುಗಾಡುತ್ತಾ ಅನುಕೂಲಪಡೆದುಕೊಂಡ ಒಬ್ಬ ಯಕಶ್ಚಿತ್ ವ್ಯಕ್ತಿ. ಇವರಿಗೆ ಹೆಚ್.ಡಿ.ದೇವೇಗೌಡರ ಕುಟುಂಬದ ಮಾತನಾಡುವ ಯಾವುದೇ ಯೋಗ್ಯತೆಯಿಲ್ಲ. ದೇವೇಗೌಡರ ಕುಟುಂಬದ ಕೃಪಾಕಟಾಕ್ಷದಿಂದ ರಾಜಕಾರಣಿಯಾದ ಜಮೀರ್ ಗೌಡರ ಕುಟುಂಬದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಕುಮಾರಣ್ಣನ ಬಗ್ಗೆ ಲಘುವಾಗಿ ಮಾತನಾಡುವುದರಿಂದ ಆತ ಮುಸ್ಲಿಂ ನಾಯಕನಾಗಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷದಲ್ಲಿ ಉಂಡೆದ್ದ ಜಮೀರ್ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಹಚ್ಚಲು ಹೋಗಿದ್ದಾನೆ. ಕಾಂಗ್ರೆಸ್ ಮುಖಂಡ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ಜಮೀರ್ ಬಗ್ಗೆ ಕಾಂಗ್ರೆಸ್ಸಿಗರು ಧ್ವನಿಯೆತ್ತಬೇಕು.
ಕುಮಾರಣ್ಣನ ಬಣ್ಣದ ಬಗ್ಗೆ ಮಾತನಾಡುವ ಮೂಲಕ ಕಪ್ಪು ಬಣ್ಣದ ಭಾರತೀಯರನ್ನು ಅಪಹಾಸ್ಯ ಮಾಡಿರುವ ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಖಂಡಿಸಬೇಕು. ಕಪ್ಪು ಕನ್ನಡ ಪರಂಪರೆಯ ಸಂಕೇತ. ಕಪ್ಪು ಕಸ್ತೂರಿ, ಸುರಿಸುವ ಮಳೆ ಮೋಡ ಕಪ್ಪು, ಕಣ್ಣ ಕಾಡಿಗೆ ಕಪ್ಪು, ನಮ್ಮ ಯೌವನದ ಸಂಕೇತವಾದ ತಲೆಕೂದಲ ಬಣ್ಣ ಕಪ್ಪು. ಕಪ್ಪು ಬಣ್ಣವನ್ನು ಅವಹೇಳನ ಮಾಡುವ ಮೂಲಕ ಜಮೀರ್ ಕನ್ನಡ ಸಂಸ್ಕøತಿ ಮತ್ತು ಪರಂಪರೆಯನ್ನು ಅವಹೇಳನಮಾಡಿದ್ದು ಅವರಿಗೆ ಮಸಿ ಬಳಿಯುವ ಮೂಲಕ ಕಪ್ಪಿನ ಮಹತ್ವವನ್ನು ಜೆಡಿಎಸ್ ಕಾರ್ಯಕರ್ತರು ಮಾಡಿಕೊಡಲಿದ್ದಾರೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಗೆ ಒತ್ತಾಯ: ಸಚಿವ ಕೆ.ಸಿ. ನಾರಾಯಣ ಗೌಡರ ಸ್ವಕ್ಷೇತ್ರದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಯಾರದೂ ಹೆಸರಿಗೆ ಗುತ್ತಿಗೆ ಅಗ್ರಿಮೆಂಟ್ ಮಾಡಿ ಮತ್ಯಾರ ಹೆಸರಿಗೂ ಬಿಲ್ ಮಾಡಿಕೊಡಲಾಗುತ್ತಿದೆ. ನೀರಾವರಿ ಇಲಾಖೆಯ ಎಂಜಿನಿಯರ್ ಶ್ರೀನಿವಾಸ್ ಕಾಮಗಾರಿ ಆರಂಭಿಸದಿದ್ದರೂ ಗುತ್ತಿಗೆದಾರರಿಗೆ ಮುಂಗಡವಾಗಿಯೇ ಕೋಟಿ ಕೋಟಿ ಹಣ ಬಿಲ್ ಮಾಡಿಕೊಟ್ಟಿದ್ದಾರೆ. ಶ್ರೀನಿವಾಸ್ ಅವರ ಬ್ರಚ್ಟಾಚಾರದ ಬಗ್ಗೆ ಎಸಿಬಿಯಿಂದ ಹಿಡಿದು ರಾಜ್ಯಪಾಲರವರೆಗೆ ದಾಖಲೆ ಸಮೇತ ದೂರು ನೀಡಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಸಚಿವ ಕೆ.ಸಿ.ನಾರಾಯಣಗೌಡರ ಒತ್ತಾಸೆಯಿಂದಲೇ ಬ್ರಷ್ಟಾಚಾರ ನಡೆಯುತ್ತಿರುವುದರಿಂದ ಸಚಿವರು ಬ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಳ ಬಗ್ಗೆ ಮೌನವಾಗಿದ್ದು ರಾಜ್ಯ ಸರ್ಕಾರವೇ ಅಭಿವೃದ್ದಿಯ ಹೆಸರಿನಲ್ಲಿ ಜನರ ತೆರಿಗೆಯ ಹಣದ ಲೂಟಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಮುಖಂಡರು ಬ್ರಷ್ಟ ಎಂಜಿನಿಯರ್ ಶ್ರೀನಿವಾಸ್ ವಿರುದ್ದ ಕ್ರಮ ಜರುಗಿಸದಿದ್ದರೆ ಜೆಡಿಎಸ್ ಬೀದಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಅಭಿನಂದನೆ: ಇತ್ತೀಚೆಗೆ ನಡೆದ ತಾಲೂಕಿನ ಮಾಕವಳ್ಳಿ ಗ್ರಾಮ ಪಂಚಾಯತಿಯ 15 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿಗರು 10 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿಯಲ್ಲೂ ಜೆಡಿಎಸ್ ದಿಗ್ವಿಜಯ ಸಾಧಿಸಲಿದೆ. ಮಾಕವಳ್ಳಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ದುಡಿದ ಕಾರ್ಯಕರ್ತರು ಮತ್ತು ಮತದಾರರನ್ನು ಪಕ್ಷ ಕೃತಜ್ಞತೆಯಿಂದ ನೆನೆಯು ತ್ತದೆಂದು ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮ, ಹಿರೀಕಳಲೆ ರಾಮದಾಸ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಎಪಿಎಂಸಿ ಅಧ್ಯಕ್ಷ ಚಂದ್ರ ಹಾಸ್, ಮಾಜಿ ಅಧ್ಯಕ್ಷ ನಾಗರಾಜೇಗೌಡ, ಹಳವೇ ಗೌಡ, ವಡ್ಡರಹಳ್ಳಿ ಮಹಾದೇವ್, ಸಚ್ಚಿನ್ ಕೃಷ್ಣ, ಮುಖಂಡರಾದ ರೇವಣ್ಣ, ಮಾಕ ವಳ್ಳಿ ರಾಮೇಗೌಡ, ವಸಂತಕುಮಾರ್, ಅಗ್ರಹಾರ ಬಾಚಹಳ್ಳಿ ನಾಗೇಶ್, ಹುಲ್ಲೇಗೌಡ, ತಾ.ಪಂ ಸದಸ್ಯ ರಾಜು, ಹರಿಹರಪುರ ನರಸಿಂಹ ಸೇರಿ ದಂತೆ ಹಲವರು ಮಾತನಾಡಿದರು.