ಕಪ್ಪು ಕರಡಿಗಳ ಬೀಡಾಗಿರುವ  ಗುಡೇಕೋಟೆ ಕರಡಿಧಾಮ ಪ್ರವಾಸಿ ತಾಣವಾಗಬೇಕು – ರಿಷಬ್ ಶೆಟ್ಟಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 20 :-   ವಿಶ್ವದ ಎಲ್ಲಿಯೂ ಕಾಣಸಿಗದಂಥ ಕಪ್ಪು ಕರಡಿಗಳು ಇಲ್ಲಿ ಯಥೇಚ್ಚವಾಗಿ ಜೀವಿಸುತ್ತಿದ್ದು,ವಿಜಯನಗರ ಜಿಲ್ಲೆಗೆ ಸೇರಿರುವ ತಾಲೂಕಿನ ಗುಡೇಕೋಟೆ ಭಾಗದ ಅರಣ್ಯ ಪ್ರದೇಶದ ಈ ಭಾಗವನ್ನು ವಿಶ್ವದ ಎರಡನೇ ಕರಡಿಧಾಮವಾಗಿ ಮಾಡಲಾಗಿದೆ. ಇಂಥ ಕರಡಿಧಾಮವನ್ನು ಪ್ರವಾಸೋದ್ಯಮ ತಾಣವಾಗಿ ಮಾಡುವುದರಿಂದ ಕಾಡಿನ ಸುತ್ತಮುತ್ತಲಿನ ಹಳ್ಳಿಗಳ ಜನರ ಅಭಿವೃದ್ಧಿಯ ಜತೆಗೆ ಕಾಡು, ವನ್ಯಜೀವಿಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ನಟ ನಿರ್ದೇಶಕ ಹಾಗೂ ಪರಿಸರ ಪ್ರೇಮಿ ರಿಷಬ್ ಶೆಟ್ಟಿ ತಿಳಿಸಿದರು.
ಅವರು ಭಾನುವಾರ ತಾಲೂಕಿನ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಸುತ್ತಾಡಿ ಅಲ್ಲಿನ ಪರಿಸರ ಹಚ್ಚಹಸಿರಿನ ಪರಿಸರ ಕಂಡಂತೆ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ ಬಳ್ಳಾರಿ ಜಿಲ್ಲೆಯ ಬಗ್ಗೆ ನನ್ನಲ್ಲಿ ಕಲ್ಪನೇ ಬೇರೆ ಇತ್ತು. ಬಳ್ಳಾರಿ ಅಂದ್ರೆ ಬರೀ ಧೂಳು, ಎಲ್ಲೆಲ್ಲೂ ಕೆಂಪು ಕೆಂಪು ಬಣ್ಣವೇ ಕಾಣ್ತಿತ್ತು. ಈಗ ಎಲ್ಲೆಲ್ಲೂ ಹಸಿರಿನ ಪರಿಸರವೇ ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುತ್ತಿದೆ ಕೂಡ್ಲಿಗಿ ತಾಲೂಕಿನ  ಗುಡೇಕೋಟೆ ಕರಡಿಧಾಮ ಇರುವ ಕಾಡಂಚಿನ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ತಪ್ಪಿಸಲು ಅರಣ್ಯವನ್ನು ಸಂರಕ್ಷಿಸಬೇಕು. ಕಾಡಂಚಿನ ಹಳ್ಳಿಗಳಲ್ಲಿ ಸರಕಾರ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಿ ಪ್ರಾಣಿ ಮತ್ತು ಮಾನವ ಸಂಘರ್ಷದಿಂದ ಆಗುವ ಜೀವಹಾನಿ, ಅನಾಹುತಗಳನ್ನು ತಪ್ಪಿಸಬಹುದು.
ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಿದ್ದರಿಂದ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅದೇ ರೀತಿಯಾಗಿ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅರಣ್ಯಪ್ರದೇಶದ ಕರಡಿಧಾಮವನ್ನು ಪ್ರವಾಸೋಧ್ಯಮ ತಾಣವಾಗಿ ಮಾಡಲು ಯೋಗ್ಯವಾಗಿದ್ದು ಸರ್ಕಾರದ ಗಮನಕ್ಕೆ ತರಲಾಗುವುದೆಂದು ಎಂದು ತಿಳಿಸಿದ ಅವರು ಈ ಮೂಲಕ ಕಾಡು ಮತ್ತು ವನ್ಯ ಜೀವಿಗಳನ್ನು ಉಳಿಸುವ ಯೋಚನೆ ಪ್ರವಾಸಿಗರಲ್ಲಿ ಬರಲಿದೆ. ಅಲ್ಲದೆ, ಕಾಡು ಪ್ರಾಣಿಗಳಿಂದ ಸಾವು, ನೋವುಗಳು ಸಂಭವಿಸಿದರೆ ಅಂಥವರ ಕುಟುಂಬಗಳಿಗೆ ಸರಕಾರ ಹೆಚ್ಚಿನ ಪರಿಹಾರ ಕೊಡಬೇಕೆಂದು ಮನವಿ ಮಾಡಲಾಗುವುದು ಎಂದು ರಿಷಬ್ ಶೆಟ್ಟಿ
ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ವಿಜಯನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಸಾರನ್, ಎಸಿಎಫ್ ಬಾಬು ಮೇಧಾ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಎ.ರೇಣುಕಮ್ಮ ಸೇರಿ ಇತರರಿದ್ದರು.
ಪುನೀತ್  ನೆನೆದ ರಿಷಬ್
ಸಿನೆಮಾ ರಂಗದಲ್ಲಿ ಪವರ ಸ್ಟಾರ್ ಆಗಿ ಮಿಂಚಿದ್ದ ಡಾ.ಪುನೀತ್ ರಾಜಕುಮಾರ್ ಅವರು ಕಾಡು, ವನ್ಯಜೀವಿಗಳ ಉಳಿವಿಗಾಗಿ ಇಟ್ಟಿದ್ದ  ಕಾಳಜಿ ಅತ್ಯಂತ ಶ್ಲಾಘನೀಯ. ಅಪ್ಪು ಅವರು ಭೇಟಿ ನೀಡಿದ್ದ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮ, ವಿಸ್ಮಯ ಕಲ್ಲು ಹಾಗೂ ಕಾಳಿ ನದಿ ಪರಿಸರ ಸೇರಿ ನಾನಾ ಕಡೆ ನಾನು ಹೋಗಿ ಭೇಟಿ ನೀಡಿರುವುದು ನನ್ನ ಪುಣ್ಯ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು. ಕಾಡು ಉಳಿಸಿ ಪರಿಸರ ಕಾಪಾಡದಿದ್ದರೆ ಮನುಷ್ಯ ಬದುಕುವುದು ಕಷ್ಟವಾಗಲಿದೆ. ಹೀಗಾಗಿ, ಕಾಡಂಚಿನ ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾಡು ಮತ್ತು ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡುವುದು ನನಗೆ ಸಮಾಧಾನ ತರುತ್ತಿದೆ ಎಂದರು.ದೇಶದಲ್ಲೇ 2ನೇ ಅತಿದೊಡ್ಡ ಕರಡಿಧಾಮವೆಂಬ ಹೆಗ್ಗಳಿಕೆಯ ಗುಡೇಕೋಟೆ ಕರಡಿಧಾಮವನ್ನು ಪ್ರವಾಸೋದ್ಯಮ ತಾಣವಾಗಿ ಮಾಡುವ ಅಗತ್ಯವಿದೆ ಎಂದು ನಟ ಹಾಗೂ ವನ್ಯಜೀವಿ ಪ್ರೇಮಿ ರಿಷಬ್ ಶೆಟ್ಟಿ ತಿಳಿಸಿದರು.