ಕಪಲಾಪೂರ ಅಲ್ಪಸಂಖ್ಯಾತರ ವಸತಿ ಕಾಲೇಜಿಗೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ, ಪರಿಶೀಲನೆ

ಬೀದರ ಜ. 10: ಪಶು ಸಂಗೋಪನೆ, ಹಜ್, ವಕ್ಫ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜ.9ರಂದು ಬೀದರ ತಾಲೂಕಿನ ಕಪಲಾಪೂರ(ಎ) ಗ್ರಾಮದ ಬಳಿಯಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.
ವಸತಿ ಕಾಲೇಜಿನ ಮುಖ್ಯ ಕಟ್ಟಡದಲ್ಲಿರುವ ತರಗತಿ ಕೋಣೆಗಳು, ಹತ್ತಿರದಲ್ಲಿರುವ ಬಾಲಕಿಯರ ವಸತಿ ನಿಲಯ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ವಸತಿ ಗೃಹಗಳಿಗೆ ಭೇಟಿ ನೀಡಿ, ಕಟ್ಟಡದ ಗುಣಮಟ್ಟವನ್ನು ಪರಿಶೀಲಿಸಿದರು. ಅಲ್ಲಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು, ಕೆಲವು ಕಡೆ ಕೆಟ್ಟು ಹೋದ ಸಿಂಕ್‍ಗಳು, ಕಳಪೆ ಮಟ್ಟದ ಫ್ಯಾನ್, ಟ್ಯೂಬ್‍ಲೈಟ್ಸ್, ವಿದ್ಯುತ್ ಉಪಕರಣಗಳ ಅಳವಡಿಕೆ ಕಳಪೆಯಾಗಿರುವುದು, ಬಾಗಿಲುಗಳು ಸರಿಪಡಿಸದೇ ಇರುವುದು ಸೇರಿದಂತೆ ಕಟ್ಟಡ ನಿರ್ಮಾಣದಲ್ಲಿ ಸಾಕಷ್ಟು ಲೋಪಗಳಿರುವುದನ್ನು ಕಂಡು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಟ್ಟಡದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟರ್ ಸರಿಯಾಗಿ ಮಾಡದಿರುವುದು, ಕಚೇರಿ ಕಟ್ಟಡದಲ್ಲಿ ಟೈಲ್ಸ್ ಪಾಲಿಶ್ ಮಾಡದೇ ಇರುವುದನ್ನು ಗಮನಿಸಿದರು. ಕಟ್ಟಡವು ಹೊಸದಾಗಿ ನಿರ್ಮಾಣಗೊಂಡ ಆರೇಳು ತಿಂಗಳುಗಳಲ್ಲೇ ಕಟ್ಟಡದಲ್ಲಿ ಇಂತಹ ದುಸ್ಥಿತಿ ಕಾಣಿಸಿದರೆ ಹೇಗೆ ಎಂದು ಸಚಿವರು ಪ್ರಶ್ನಿಸಿದರು.
ಮಳೆ ಬಿದ್ದಾಗ ತರಗತಿ ಕೋಣೆಗಳಲ್ಲಿ ನೀರು ಬರುತ್ತದೆ. ಮೆಟ್ಟಿಲುಗಳನ್ನು ಅಕ್ಕಪಕ್ಕ ಸ್ಟೀಲ್ ಬಳಸದೇ ಕಬ್ಬಿಣದ ಸರಳುಗಳನ್ನು ಬಳಸಲಾಗಿದೆ. ಈ ರೀತಿ ಕಟ್ಟಡ ನಿರ್ಮಾಣ ಮಾಡಿದರೆ ಹೇಗೆ ಎಂದು ಸಚಿವರು ಹೌಸಿಂಗ್ ಬೋರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಕಾಂತ ಬಾಗೋಡೆ ಅವರಿಗೆ ಪ್ರಶ್ನಿಸಿದರು. ಕಟ್ಟಡದಲ್ಲಿನ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸುವವರೆಗೆ ಬಿಲ್ಲನ್ನು ತಡೆಹಿಡಿಯಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಭೇಟಿ: ವಸತಿ ಕಾಲೇಜಿನ ಆವರಣದಲ್ಲಿರುವ ಬಾಲಕಿಯರ ವಸತಿ ಕಟ್ಟಡಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿನ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ, ಅವರ ವಿದ್ಯಾಭ್ಯಾಸದ ಬಗ್ಗೆ ಕೇಳಿದರು. ಏನಾದರು ತೊಂದರೆಯಿದ್ದಲ್ಲಿ ತಿಳಿಸಬೇಕು. ಸರಿಯಾಗಿ ಅಧ್ಯಯನ ಮಾಡಬೇಕು ಎಂದು ಸಚಿವರು ಸಲಹೆ ಮಾಡಿದರು.
ಹಾಜರಾತಿ ಪರಿಶೀಲನೆ: ಕಾಲೇಜಿನ ಪ್ರಾಂಶುಪಾಲರಾದ ಸಂತೋಷಕುಮಾರ ಅವರೊಂದಿಗೆ ತರಗತಿಗಳು ಮತ್ತು ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದ ಸಚಿವರು, ಬೋಧಕ ಮತ್ತು ಬೋಧಕೇತರ ವರ್ಗದ ಹಾಜರಾತಿಯನ್ನು ಪರಿಶೀಲಿಸಿದರು. ಈ ಭಾಗದಲ್ಲಿ ಅತಿ ಅವಶ್ಯವಾಗಿರುವ ಈ ವಸತಿ ಕಾಲೇಜು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಸಚಿವರು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಳಿರಾಮ ಹಾಗೂ ಇನ್ನಿತರರು ಇದ್ದರು.