ಕನ್ಸರ್‍ವೆನ್ಸಿ ಗಲ್ಲಿಯಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದ ಒತ್ತುವರಿ ತೆರವು

ಮಂಡ್ಯ : ಇಲ್ಲಿನ ಅಶೋಕನಗರದಲ್ಲಿ ಕನ್ಸರ್‍ವೆನ್ಸಿ ಗಲ್ಲಿಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ಕಟ್ಟಿದ್ದವರನ್ನು ನಗರಸಭೆ ವತಿಯಿಂದ ಭಾನುವಾರ ತೆರವುಗೊಳಿಸಲಾಯಿತು.
ನಗರಸಭೆ ಪೌರಾಯುಕ್ತ ಎಸ್.ಲೋಕೇಶ್ ನೇತೃತ್ವದಲ್ಲಿ ಜೆಸಿಬಿ ಯಂತ್ರಗಳನ್ನು ತಂದು ಮೂರು ಅಂಗಡಿಗಳನ್ನು ತೆರವು ಮಾಡಲಾಯಿತು. ಇನ್ನುಳಿದ ಮೂರು ಅಂಗಡಿಯವರು ತಾವೇ ತೆರವುಗೊಳಿಸುವುದಾಗಿ ತಿಳಿಸಿದ್ದರಿಂದ ಎರಡು ದಿನಗಳ ಕಾಲಾವಕಾಶ ನೀಡಲಾಯಿತು.


ಕನ್ಸರ್‍ವೆನ್ಸಿ ಗಲ್ಲಿಗಳನ್ನು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿದ್ದರಿಂದ ಆ ಗಲ್ಲಿಗಳಲ್ಲಿರುವ ಮ್ಯಾನ್‍ಹೋಲ್‍ಗಳು ಕಟ್ಟಿಕೊಂಡಲ್ಲಿ ದುರಸ್ತಿ ಮಾಡುವುದಕ್ಕೆ, ಸ್ವಚ್ಛಗೊಳಿಸುವುದಕ್ಕೆ ಪೌರ ಕಾರ್ಮಿಕರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಹಲವು ಬಾರಿ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಉದಾಸೀನ ಮಾಡಿದ್ದರು.
ಕಟ್ಟಡ ತೆರವಿಗೆ ಹಿಂದೇಟು ಹಾಕುತ್ತಿದ್ದ ಮಾಲೀಕರ ವರ್ತನೆ ವಿರುದ್ಧ ತಿರುಗಿಬಿದ್ದ ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು ಹಾಗೂ ಪೌರಾಯುಕ್ತ ಎಸ್.ಲೋಕೇಶ್ ಬೆಳಗ್ಗೆ 6 ಗಂಟೆಗೆ ಜೆಸಿಬಿ ಯಂತ್ರಗಳೊಂದಿಗೆ ಆಗಮಿಸಿ ಅಶೋಕನಗರ ಮೊದಲನೇ ಕ್ರಾಸ್‍ನಲ್ಲಿ ಕನ್ಸರ್‍ವೆನ್ಸಿ ಗಲ್ಲಿಗಳನ್ನು ಒತ್ತುವರಿ ಮಾಡಿದ್ದ ಮೂರು ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು.
ಮುಂದಿನ ಕ್ರಾಸ್‍ನಲ್ಲಿದ್ದ ಉಳಿದ ಮೂರು ಅಂಗಡಿಗಳನ್ನು ತೆರವು ಮಾಡಲು ಮುಂದಾದಾಗ ಮಾಲೀಕರು ಸಮಯಾವಕಾಶ ನೀಡಿದರೆ ತಾವೇ ಅದನ್ನು ತೆರವುಗೊಳಿಸುವ ಭರವಸೆ ನೀಡಿದರು.
ಮೊದಲ ಹಂತದಲ್ಲಿ ಕನ್ಸರ್‍ವೆನ್ಸಿ ಗಲ್ಲಿಗಳ ತೆರವು ಕಾರ್ಯ ನಡೆಸಲಾಗುತ್ತಿದೆ. ಉಳಿದ ಬಡಾವಣೆಗಳಲ್ಲೂ ಗಲ್ಲಿಗಳನ್ನು ಅತಿಕ್ರಮಿಸಿಕೊಂಡಿರುವುದರಿಂದ ಸ್ವಚ್ಛತಾ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಹಂತ ಹಂತವಾಗಿ ಅವುಗಳನ್ನೂ ತೆರವುಗೊಳಿಸುವುದಾಗಿ ಪೌರಾಯುಕ್ತ ಎಸ್.ಲೋಕೇಶ್ ತಿಳಿಸಿದರು.
ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.