ಕನ್ನೂರ ಶಾಂತಿ ಕುಟೀರದಲ್ಲಿ ಶ್ರದ್ಧೆ, ಭಕ್ತಿಯಿಂದ ರಾಮ ನವಮಿ ಸಪ್ತಾಹ ಆಚರಣೆ

ವಿಜಯಪುರ,ಏ.18:ತಾಲೂಕಿನ ಕನ್ನೂರು ಶಾಂತಿಕುಟೀರದಲ್ಲಿ ಕಳೆದ ಒಂಬತ್ತು ದಿನಗಳಿಂದ ಯುಗಾದಿ ಪಾಡ್ಯದಿಂದ ರಾಮನವಮಿಯವರೆಗೆ ಜ್ಞಾನ ಯಜ್ಞರೂಪದಲ್ಲಿ ರಾಮ ನವಮಿ ಸಪ್ತಾಹ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ 1993 ರಿಂದ ಪ್ರಾರಂಭವಾಗಿದ ದಿಂಡಿ ಪಾದಯಾತ್ರೆಗಳು ಆರು ಬೇರೆ ಬೇರೆ ಭಾಗದಿಂದ ಶಾಂತಿಕುಟೀರ, ಕನ್ನೂರಕ್ಕೆ ಆಗಮಿಸಿದವು . ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರು ಸ್ಥಾಪಿಸಿದ ಭಾರತೀಯ ಸುರಾಜ್ಯ ಸಂಸ್ಥೆಯ ಧ್ಯೆಯೋದ್ದೇಶಗಳಾದ ನೀತಿ, ಭಕ್ತಿ, ಆದರ್ಶ ಗ್ರಾಮ ಮತ್ತು ಸ್ವದೇಶಿ ವಿಚಾರಗಳ ಪ್ರಚಾರ ಪ್ರಸಾರ ಮಾಡುವುದೇ ಈ ದಿಂಡಿ ಪಾದಯಾತ್ರೆಗಳ ಉದ್ದೇಶವಾಗಿತ್ತು. ಕಡು ಬಿಸಿಲಿನಲ್ಲಿ ,ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಸದ್ಗುರು ನಾಮ ಘೋಷ, ಜಯಕಾರದೊಂದಿಗೆ ಅತ್ಯಂತ ಆನಂದ ಉತ್ಸಾಹದಿಂದ ಈ ಪಾದಯಾತ್ರಿಕರು ಮನೆ ಮಠ ತೊರೆದು ದಿಂಡಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಇಂಡಿ ತಾಲೂಕಿನ ಭಕ್ತಿ ಕುಟೀರ ಅರ್ಜನಾಳ, ಆಲಮೇಲ ತಾಲೂಕಿನ ಬ್ರಹ್ಮಾನಂದ ಕುಟೀರ ಬೊಮ್ಮನಹಳ್ಳಿ, ಜತ್ತ, ರಾಮತೀರ್ಥ, ಕಕಮರಿಯ ದಿಂಡಿ, ವಿಜಯಪುರ ದಿಂಡಿ, ಸೋಲಾಪುರ ಜಿಲ್ಲೆಯ ಬಾರ್ಶಿ ಹಾಗೂ ಮೊಹೋಳ ತಾಲೂಕಿನ ಗೋಟೆವಾಡಿ ದಿಂಡಿ ಹೀಗೆ ಆರು ದಿಂಡಿ ಪಾದಯಾತ್ರಿಕರು ಕಡು ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಸದ್ಗುರು ನಾಮ ಘೋಷದೊಂದಿಗೆ ಶ್ರದ್ಧಾ ಭಕ್ತಿಯಿಂದ ತಮ್ಮ ಗಂತವ್ಯ ಸ್ಥಾನವಾದ ಶಾಂತಿಕುಟೀರಕ್ಕೆ ತಲುಪಿದರು.
ಪ್ರತಿನಿತ್ಯವೂ ಶಾಂತಿಕುಟೀರದಲ್ಲಿ ದಾಸಬೋಧ ಹಾಗೂ ಸಮರ್ಥ ಸದ್ಗುರು ಶ್ರೀ ಗಣಪತ್ರಾವ ಮಹಾರಾಜರ ಮೇರುಕೃತಿ ಸುಲಭ ಆತ್ಮಜ್ಞಾನ ಗ್ರಂಥದ ಮೇಲೆ ವಿವೇಚನೆಗಳು ನಡೆದವು. ದಿಂಡಿಪಾದಯಾತ್ರಿಕರು ಮಾರ್ಗ ಮಧ್ಯದಲ್ಲಿ ಸುಮಾರು 200 ಹಳ್ಳಿಗಳನ್ನು ಸಂಪರ್ಕಿಸಿದರು. ಪ್ರತಿಯೊಂದು ಹಳ್ಳಿಯಲ್ಲಿ ಕನ್ನಡ ಮರಾಠಿ ಭಾಷೆಯ ತತ್ವ ಸಾರುವ ವಿವಿಧ ಕಾರ್ಯಕ್ರಮಗಳನ್ನು ಜನರ ಮನಮುಟ್ಟುವಂತೆ ಮಾಡಿ ವಿಧಾಯಕ ಕಾರ್ಯಗಳನ್ನು ಆಚರಿಸಲು ಪ್ರೇರೇಪಿಸಿದರು. ಗ್ರಾಮಸ್ಥರು ಈ ದಿಂಡಿ ಪಾದಯಾತ್ರೆಯನ್ನೇ ಎದುರು ನೋಡುತ್ತಾ ಊಟೋಪಚರಾದಿ ಸಕಲ ವ್ಯವಸ್ಥೆಗಳನ್ನು ಮಾಡುತ್ತಿದ್ದರು. ಎಲ್ಲಾ ದಿಂಡಿ ಪಾದಯಾತ್ರೆ ಮುಖ್ಯಸ್ಥರು ತಮ್ಮ ತಮ್ಮ ತಂಡದೊಂದಿಗೆ ಸುಕ್ಷೇತ್ರ ಶಾಂತಿಕುಟೀರದಲ್ಲಿ ತಾವು ವಿವಿಧಡೆ ಮಾಡಿದ ಕಾರ್ಯಕ್ರಮದ ಝಲಕ್ ತೋರಿಸಿದರು. ಅದರಲ್ಲಿ ಪದ ಪದ್ಯಗಳು, ಭಾರುಡ,ಸಂವಾದ, ಕಿರು ನಾಟಕ, ಗೀಗೀ ಪದ, ತತ್ವಪದ, ಡೊಳ್ಳಿನ ಹಾಡು ಮುಂತಾದವು ಸೇರಿದ್ದವು.
ರಾಮನವಮಿ ಸಪ್ತಾಹದ ಕೊನೆ ದಿನವಾದ ಬುಧವಾರ 10.30 ಕ್ಕೆ ಕಾರ್ಯಕ್ರಮ ಪ್ರಾರಂಭವಾಯಿತು. ಸದ್ಗುರು ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ರಮೇಶ ಕನ್ನೂರ ಎಲ್ಲರ ಪರವಾಗಿ ಭಕ್ತಿ ಸುಮನಗಳನ್ನು ಅರ್ಪಿಸಿದರು. ದಿಂಡಿಪಾದಯಾತ್ರೆ ಕಾರ್ಯಕ್ರಮ ಜರುಗಿದವು. ಗಣೇಶ ನಾಯಿಕ ಹಾಗೂ ಅನಂತ ಕುಲಕರ್ಣಿ ಪ್ರವಚನ ಮಾಡಿದರು.
ಇದೇ ಸಂದರ್ಭದಲ್ಲಿ ಶಾಂತಿ ಕುಟೀರ ಸಂದೇಶ ತ್ರೈಮಾಸಿಕದ ರಾಮನವಮಿ ಸಂಚಿಕೆ ಬಿಡುಗಡೆ ಮಾಡಲಾಯಿತು.ತತ್ಪಶ್ಚಾತ್ ರಾಮಪ್ರಭುವಿನ ತೊಟ್ಟಿಲು ಕಾರ್ಯಕ್ರಮ ಜರುಗಿತು. ಶ್ರದ್ಧಾ ಭಕ್ತಿಯಿಂದ ಮಾತೆಯರು ಬಾಲ ರಾಮನಿಗೆ ಹೆಸರಿಟ್ಟು ಜೋಗುಳ ಪದ, ಆರತಿ ಪದ ಹಾಡಿದರು. ಸಪ್ತಾಹ ಸಮಾಪ್ತಿ ಪುಷ್ಪವೃಷ್ಟಿ ಆಯಿತು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಪ್ತವಾಯಿತು. ಗೋಕುಲ್ ಬಾಹಿತಿ, ಡಾ. ಸತೀಶ್ ಕನ್ನೂರ, ಸಂಜಯ ತಿಕೋಟಿ, ಬಿ.ಬಿ. ಪೂಜಾರ, ಮಹೇಶ ಜೋಷಿ, ಅಪ್ಪು ಚಿಗದೊಳ್ಳಿ, ಬಾಪು ಫೆÇೀಟಭರೆ, ಭಾವುಸಾಹೇಬ ಜಾಧವ, ರಾಜುಗೌಡ ಪಾಟೀಲ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿ, ಮುಂಬರುವ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಕುರಿತು ಮಾಹಿತಿ ನೀಡಿದರು. ಅನೇಕ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.