
ವಿಜಯಪುರ:ಎ.4: ಕನ್ನೂರಿನ ಶಾಂತಿಕುಟೀರ ಅತ್ಯಂತ ಶಾಂತಕ್ಷೇತ್ರವಾಗಿದೆ. ವಿವಿಧ ಕ್ಷೇತ್ರಗಳಿರುವುದನ್ನು ಮನಗಂಡಿ ದ್ದೇವೆ. ಆದರೆ ಇಂತಹ ಶಾಂತಿ ಕ್ಷೇತ್ರ ಬೇರೊಂದಿಲ್ಲ ಎಂದು ಬೊಮ್ಮನಳ್ಳಿಯ ಗವಿಮಠದ ಶ್ರೀ ಗುರುಶಾಂತ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಜಿಲ್ಲೆಯ ವಿಜಯಪುರ ತಾಲೂಕಿನ ಕನ್ನೂರಿನ ಶಾಂತಿ ಕುಟೀರದಲ್ಲಿ ನಿನ್ನೆ ಆರಂಭಗೊಂಡ ಒಂದು ತಿಂಗಳ “ಉಚಿತ ಶೈಕ್ಷಣಿಕ-ಆಧ್ಯಾತ್ಮಿಕ ಬೇಸಿಗೆ ಶಿಬಿರ”ದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯತೆ ವಹಿಸಿ ಸದ್ಗುರು ಗಣಪತರಾವ ಮಹಾ ರಾಜರ ಭಾವಚಿತ್ರ ಪೂಜೆ ನೆರವೇರಿಸಿ ಮಾತನಾಡಿದರು.
ಶಾಂತಿ ಕುಟೀರ ಸಂತರೆನಿಸಿದ್ದ ಶ್ರೀ ಗಣಪತರಾವ ಮಹಾರಾಜರ ಒಡನಾಟವನ್ನು ಸ್ಮರಿಸಿಕೊಂಡ ಅವರು ಇಂತಹ ಶಾಂತಿ ಕ್ಷೇತ್ರದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ” ಎಂದರಲ್ಲದೇ ಶಿಬಿರದ ಉತ್ತಮ ಪ್ರಯೊಜನ ಪಡೆದು ಸಧೃಡ ಭಾರತವನ್ನು ಕಟ್ಟುವ ಧೀಮಂತ ನಾಯಕರಾಗುವಂತೆ ಆಶೀರ್ವದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಸಾಧಕ ಶ್ರೀ ಕೃಷ್ಣ ಸಂಪಗಾಂವಕರ ಗುರೂಜಿ, ಕಳೆದ 22 ವರ್ಷಗಳ ಕಾಲ ಶಿಬಿರ ನಡೆದು ಬಂದ ದಾರಿ ವಿವರಿಸುತ್ತ ಈ ಉಚಿತ ಬೇಸಿಗೆ ಶಿಬಿರದ ಸದುಪಯೋಗದ ಕುರಿತು “ಪಾಣಿನಿ”ಯವರ ದೃಷ್ಠಾಂತದ ಮೂಲಕ ಮಕ್ಕಳಿಗೆ ಮನ ಮುಟ್ಟುವಂತೆ ಹಾಗೂ ಬೇಸಿಗೆ ಶಿಬಿರದಲ್ಲಿಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿದರು.
ನಂತರ ಗುರು ಮನೆತನದ ಹಿರಿಯ ರಮೇಶ ಕನ್ನೂರ ಮಾತನಾಡಿ, ಉಚಿತ ಶೈಕ್ಷಣಿಕ-ಆಧ್ಯಾತ್ಮಿಕ ಬೇಸಿಗೆ ಶಿಬಿರವನ್ನು 2001ರ ದಶಕದಲ್ಲಿ ಗುರುಬಂಧುಗಳಾದ ದಿ. ಎಸ್.ವಿ. ನಾನಾವಟೆಯವರು ಕನ್ನೂರು ಹಾಗೂ ಸುತ್ತಮುತ್ತಲಿನ 10 ಗ್ರಾಮ ಗಳಿಗೆ ಸ್ವತಃ ತಾವೇ ತಿರುಗಾಡಿ ಸಾರಿಗೆ ಸೌಕರ್ಯವಿಲ್ಲದ ಆ ಕಾಲದಲ್ಲಿ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಅವಿರತವಾಗಿ ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.
ಭಾರತೀಯ ಸುರಾಜ್ಯ ಸಂಸ್ಥೆ ಕಾರ್ಯಧ್ಯಕ್ಷ ಶ್ರೀನಿವಾಸ ಕುಲಕರ್ಣಿ ಮಾತನಾಡಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ನೀತಿ ವಂತರು, ಗುಣವಂತರು, ಸಧೃಡ ಸಂಪನ್ನರು ಮತ್ತು ಅಪ್ರತಿಮ ದೇಶಭಕ್ತರಾಗಲು ಇಂತಹ ಶಿಬಿರಗಳು ಸಹಕಾರಿ ಎಂದರು.
ಸಂಡೂರು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್ ನಾನವಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿ ಕುಟೀರ ಟ್ರಸ್ಟ ಅಧ್ಯಕ್ಷ ಗೋವಿಂದ ಬಾಹೇತಿ ವಹಿಸಿದ್ದರು. ಸಂಡೂರು ಶ್ರೀ ಶೈಲೇಶ್ವರ ವಿದ್ಯಾಕೇಂದ್ರ ಅಧ್ಯಕ್ಷೆ ಲಕ್ಷ್ಮೀ. ಎಸ್.ನಾನಾವಟೆ ಮತ್ತು ಸೂರಜ ವೈದ್ಯ ಉಪಸ್ಥಿತರಿದ್ದರು. ಪ್ರಕಾಶ ಆರ್ ಪಾಟೀಲ ಡೊಮನಾಳ ವಂದಿಸಿದರು. ಕನ್ನೂರಿನ ಸುತ್ತಮುತ್ತಲಿನ ಸುಮಾರು 15 ಹಳ್ಳಿಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.