ಕನ್ನಿಕ ಶಿಲ್ಪ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಬಮನಾ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.07: ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಮತ್ತು ಉಪನ್ಯಾಸಕರಾದ ತಾಲೂಕಿನ ಬಲ್ಲೇನಹಳ್ಳಿ ಮಂಜುನಾಥ್ (ಬಮನಾ) ಅವರಿಗೆ ಈ ಸಾಲಿನ ಮಂಡ್ಯ ಜಿಲ್ಲೆಯ ಲೇಖಕರ ಕೃತಿಗಳಿಗೆ ನೀಡಲ್ಪಡುವ ಕನ್ನಿಕ ಶಿಲ್ಪ ಸಾಹಿತ್ಯ ಪ್ರಶಸ್ತಿ ಲಭ್ಯವಾಗಿದೆ.
ಮಂಡ್ಯದ ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಜಿಲ್ಲೆಯ ಮೂವರು ಸಾಹಿತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ತಾಲ್ಲೂಕಿನ ಬಲ್ಲೇನಹಳ್ಳಿ ಮಂಜುನಾಥ್ ಬರೆದಿರುವ ಅಂತರಂಗದ ತಲ್ಲಣ ಎಂಬ ಗದ್ಯ ಲೇಖನಗಳ ಸಂಗ್ರಹಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ.09-05-2024 ರ ಭಾನುವಾರ ಮಂಡ್ಯದ ಪಿಇಎಸ್ ಕಲಾ ಮತ್ತು ವಾಣೀಜ್ಯ ಕಾಲೇಜಿನ ಸ್ವಾಮಿ ವಿವೇಕಾನಂದ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ತಮ್ಮ ಕೃತಿಗೆ ಸಾಹಿತ್ಯ ಪ್ರಶಸ್ತಿ ಪಡೆದಿರುವ ಬಲ್ಲೇನಹಳ್ಳಿ ಮಂಜುನಾಥ್ ಅವರನ್ನು ತಾಲ್ಲೂಕಿನ ಗಣ್ಯರು ಮತ್ತು ಸಾಹಿತಿಗಳು ಅಭಿನಂದಿಸಿದ್ದಾರೆ.
ತಾಲ್ಲೂಕಿನ ಪ್ರತಿಭಾನ್ವಿತ ಸಾಹಿತಿಗಳಲ್ಲಿ ಒಬ್ಬರಾದ ಬಲ್ಲೇನಹಳ್ಳಿ ಮಂಜುನಾಥ್ ಸುಮಾರು 20 ಕೃತಿಗಳನ್ನು ರಚಿಸಿದ್ದು, ಕಥಾ ಸಂಕಲನ, ಕವಿತಾ ಸಂಕಲನ ಶ್ರೀ ಕ್ಷೇತ್ರಗಳ ಪರಿಚಯ ಕೃತಿಗಳೂ ಸೇರಿದಂತೆ ಕೃಷ್ಣರಾಜಪೇಟೆ ತಾಲ್ಲೂಕನ್ನು ಸಮಗ್ರವಾಗಿ ಪರಿಚಯಿಸುವ ಕೃಷ್ಣರಾಜಪೇಟೆ ತಾಲ್ಲೂಕು ಮಹಾದರ್ಶನ ಎಂಬ ಬೃಹತ್ ಕೃತಿಯನ್ನು ಬರೆದಿದ್ದಾರೆ.