ಕನ್ನಡ ಹೆಚ್ಚು ಬಳಸಿ ಮಾತೃಭಾಷೆ ಉಳಿಸಿ: ನಾಡೋಜ್ ಮಹೇಶ್ ಜೋಶಿ

ಕಲಬುರಗಿ,ಮೇ.24:ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳು ಎಲ್ಲೊ ಒಂದು ಕಡೆ ಕನ್ನಡ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಬಳಸಿದಷ್ಟು ಕನ್ನಡ ಬೆಳೆಯುತ್ತದೆ. ಕೇವಲ ಕನ್ನಡದ ಮೇಲೆ ಅಭಿಮಾನ ಹೊಂದಿದರೆ ಸಾಲದು ಹೆಚ್ಚು ಬಳಸುವ ಮೂಲಕ ಮಾತೃ ಭಾಷೆ ಉಳಿಸಿ ಬೆಳೆಸುವ ಹೊಣೆ ಕನ್ನಡ ನಾಡಿನ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ್ ಮಹೇಶ್ ಜೋಶಿ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಆಯೋಜಿಸದ್ದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳ ಸಂಬಂಧ ಕಳಚಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣದ ಜತೆ ಸಂಸ್ಕಾರವನ್ನು ಕಲಿಯುವುದು ಅಗತ್ಯವಾಗಿದೆ ಎಂದರು.
ಹೆಚ್ಚು ಅಂಕ ಪಡೆದು ವೈದ್ಯರು, ಇಂಜಿನಿಯರ್, ಐಎಎಸ್ ಅಧಿಕಾರಿ ಸೇರಿದಂತೆ ಏನಾದರೂ ಆಗಿ ಮೊದಲು ಸತ್ಪ್ರಜೆಗಳಾಗಿ. ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದರೆ ಸಾಲದು ಜೀವನ ಎಂಬ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಾಗ ಮಾತ್ರ ಬದುಕು ರೂಪಿಸಿಕೊಳ್ಳಲು ಸಾಧ್ಯ. ಜೀವನಕ್ಕೆ ಅಂಕಗಳೇ ಮಾನದಂಡವಲ್ಲ. ಅಂಕಗಳ ಜತೆ ಸತ್ಪ್ರಜೆಗಳಾಗಿ ಸಮಾಜಕ್ಕೆ ನಿಮ್ಮಿಂದ ಏನಾದರೂ ಕೊಡುಗೆ ನೀಡಬೇಕು. ಜೀವನ ಎಂಬುವುದು ಅಪರೂಪ, ಏನನ್ನಾದರೂ ಸಾಧನೆ ಮಾಡುವ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ. ನಾನು ಬಡವ ಎಂಬ ಕೀಳರಿಮೆಯಿಂದ ವಿದ್ಯಾರ್ಥಿಗಳು ಹೊರಗೆ ಬಂದು ಮಹತ್ತರ ಸಾಧನೆ ಮಾಡಬೇಕು. ಪರೀಕ್ಷೆಯಲ್ಲಿ ಒಂದು ಸಲ ಅನುತ್ತೀರ್ಣರಾದರೆ ಮತ್ತೊಮ್ಮೆ ಉತ್ತೀರ್ಣರಾಗಬಹುದು. ಆದರೆ ಬದುಕೆಂಬ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮತ್ತೆ ಪಾಸಾಗುವ ಅವಕಾಶ ಸಿಗುವುದು ವಿರಳ ಹೀಗಾಗಿ ವಿದ್ಯಾರ್ಥಿಗಳು ಬದುಕೆಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಗುರಿಯೊಂದಿಗೆ ಮುಂದೆ ಸಾಗಬೇಕು. ಸಾಧಿಸಬೇಕು ಎಂಬ ಛಲ ಇರಬೇಕು ಎಂದು ಅವರು ಹೇಳಿದರು.
ಸಮಾಜ ಸುಧಾರಣೆಗೆ ಗುರು, ತಾಯಿ ಮತ್ತು ತಂದೆ ಪಾತ್ರ ಪ್ರಮುಖವಾಗಿದೆ. ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಗುರುಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ವೆಂಬ ಬೀಜ ಬಿತ್ತಬೇಕು ಮುಂದೆ ಅದು ಹೆಮ್ಮರವಾಗಿ ಸಮಾಜಕ್ಕೆ ನೆರಳು ನೀಡುತ್ತದೆ. ಸಂಸ್ಕಾರಯುತ ಶಿಕ್ಷಣ ಇಂದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಾಠ ಪ್ರವಚನ ಜೊತೆ ಸಾಂಸ್ಕøತಿಕ ಕಲೆ ಅಗತ್ಯವಿದೆ. ಹಲವು ಪ್ರತಿಭೆಗಳು ಎಲೆ ಮರೆ ಕಾಯಿಯಂತೆ ಮರೆಯಾಗುವ ಮುನ್ನ ಮಕ್ಕಳ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ಬೇಕು. ಈ ನಿಟ್ಟಿನಲ್ಲಿ ಪರಿಷತ್ತು ಇಂಥ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿ ಜನಾಂಗದಲ್ಲೂ ಹೊಸ ವಿಚಾರ, ಹೊಸ ಆಲೋಚನೆಗಳನ್ನು ತುಂಬುವ ಕಾರ್ಯ ನಿರಂತರ ಮಾಡಲಾಗುತ್ತಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ದೇಶಕ್ಕೆ ಒಬ್ಬ ಶ್ರೇಷ್ಠ ಸಾಧನನ್ನು ನೀಡಿದಂತಾಗುತ್ತದೆ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಅವರು ಮಾತನಾಡಿ, ಮಕ್ಕಳು ನಾಡಿನ ಭವಿಷ್ಯದ ನಿರ್ಮಾಪಕರು. ಅವರು ನಾಡಿನ ಉತ್ತಮ ಪ್ರಜೆಗಳಾಗಲು ಶಿಕ್ಷಕರು ಮತ್ತು ಪಾಲಕರ ಕಾರ್ಯ ಅತೀ ಮಹತ್ವದ್ದಾಗಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಪ್ರಾಮಾಣಿಕ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು. ಪರಿಷತ್ತಿನ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಸರಕಾರಿ ನೌಕರರ ಸಂಘ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ, ಎಕೆಆರ್‍ದೇವಿ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ್ ದೇಶಮುಖ್, ಪರಿಷತ್ ಗೌರವ ಕಾರ್ಯದರ್ಶಿಗಳಾದ ಶಿವರಾಜ್ ಅಂಡಗಿ, ಯಶವಂತರಾಯ್ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ್, ಶಿಲ್ಪಾ ಜೋಶಿ, ಸಾಹಿತಿ ಮುಡುಬಿ ಗುಂಡೇರಾವ್, ರಾಜೇಂದ್ರ ಮಾಡಬೂಳ್, ಸಿದ್ದಲಿಂಗ್ ಬಾಳಿ, ಶರಣಬಸಪ್ಪ ನರೂಣಿ, ವಿನೋದ್ ಜೇನವೇರಿ, ಕಲ್ಯಾಣಕುಮಾರ್ ಶೀಲವಂತ್, ಗಣೇಶ್ ಚಿನ್ನಾಕಾರ್, ಬಾಬುರಾವ್ ಪಾಟೀಲ್, ನಾಗಪ್ಪ ಸಜ್ಜನ್, ಎಸ್.ಕೆ. ಬಿರಾದಾರ್, ಸುರೇಶ್ ದೇಶಪಾಂಡೆ, ಪ್ರಭುಲಿಂಗ್ ಮೂಲಗೆ, ರವಿ ಶಹಾಪುರಕರ್, ಸಿದ್ಧರಾಮ್ ಹಂಚನಾಳ್, ಸೋಮಶೇಖರಯ್ಯಾ ಹೊಸಮಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.