ಕನ್ನಡ ಹೃದಯಭಾಷೆ ಮಾಡಿದ ಬಸವಾದಿ ಶರಣರು

ಕಲಬುರಗಿ:ನ.5: ವಿಶ್ವದ ಶ್ರೀಮಂತ ಭಾಷೆಯಲ್ಲಿ ಕನ್ನಡ ಒಂದಾಗಿಸಲು ಬಸವಾದಿ ಶರಣರ ಕೊಡುಗೆ ಅಮೋಘವಾಗಿದೆ. ಸಂಸ್ಕøತ, ಬೇರೆ ಭಾಷೆಗಳ ಸಾಹಿತ್ಯ, ನುಡಿಗಳಿಂದ ಜನಸಾಮಾನ್ಯರಿಗೆ ಅರ್ಥವಾಗದಿರುವ ಸಂದರ್ಭದಲ್ಲಿ ಅಚ್ಚ ಕನ್ನಡದಲ್ಲಿ ವಚನ ಸಾಹಿತ್ಯವನ್ನು ರಚಿಸಿ ಕನ್ನಡವನ್ನು ಎಲ್ಲರ ಹೃದಯಕ್ಕೆ ತಟ್ಟವು ಹಾಗೆ ಮಾಡಿ ಹೃದಯಭಾಷೆಯನ್ನಾಗಿ ಮಾಡಿದ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆಯೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

    ಅವರು ನಗರದ ಆಳಂದ ರಸ್ತೆಯ 'ಎಂ.ಎಂ.ಎನ್ ಟ್ಯೂಟೋರಿಯಲ್ಸ್'ನಲ್ಲಿ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಜಿಲ್ಲೆಯಾದ್ಯಂತ ತಿಂಗಳ ಪರ್ಯಂತ ಹಮ್ಮಿಕೊಂಡಿರುವ 'ಕನ್ನಡ ತಿಂಗಳು-ಕನ್ನಡದ ಕಣ್ಮಣಿಗಳು' ಎಂಬ ವಿಶೇಷ ಸರಣಿ ಕಾರ್ಯಕ್ರಮದಲ್ಲಿ 'ಕನ್ನಡಕ್ಕೆ ಬಸವೇಶ್ವರರ ಕೊಡುಗೆ' ಎಂಬ ಸರಣಿ-1 ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡುತ್ತಿದ್ದರು.

 ಬಸವಣ್ಣನವರು ಸಾಮಾಜಿಕ, ಧಾರ್ಮಿಕ, ಆರ್ಥಿಕ ನ್ಯಾಯದ ಹರಿಕಾರರು. ದೀನ, ದಲಿತರು, ಶೋಷಿತರ, ಮಹಿಳೆಯರ, ನಿರ್ಗತಿಕರಿಗೆ ಧ್ವನಿಯಾಗಿ ಅವರಿಗೆ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ. 'ವಿಶ್ವದ ಪ್ರಥಮ ಸಂಸತ್ತು' ಎಂದು ಕರೆಯಲ್ಪಡುವ 'ಅನುಭವ ಮಂಟಪ'ವನ್ನು ಸ್ಥಾಪಿಸಿ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಚನ ಸಾಹಿತ್ಯ ಕನ್ನಡದ ಹೃದಯವಿದ್ದಂತೆಯೆಂದರು.

 ಚಿಂತಕ ಅಣ್ಣಾರಾವ ಮಂಗಾಣೆ ಮಾತನಾಡಿ, ವಚನ ಸಾಹಿತ್ಯದಿಂದ ಕನ್ನಡ ಭಾಷೆ, ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ದೊರೆತಿದೆ. ಅದರಲ್ಲಿ ಜೀವನಕ್ಕೆ ಬೇಕಾದ ಎಲ್ಲಾ ಮೌಲ್ಯಗಳು ಅಡಗಿವೆ. ಪ್ರತಿಯೊಬ್ಬರು ವಚನಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಜೀವನದಲ್ಲಿ ಅಳವಡಿಸಕೊಂಡರೆ ಬದುಕು ಸುಂದರವಾಗುತ್ತದೆಯೆಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ಎಸ್.ಎಸ್.ಪಾಟೀಲ ಬಡದಾಳ, ಮಹಾಂತೇಶ ಬಿರಾದಾರ, ಅಮರ ಜಿ.ಬಂಗರಗಿ, ಮಹಾದೇವ, ಓಂಕಾರ ಗೌಳಿ ಸೇರಿದಂತೆ ಹಲವರಿದ್ದರು.