-ಸಂಜಯ್ ನಾಗ್.ಆರ್
ಬೆಂಗಳೂರು: ಬದಲಾದ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಮಾಧ್ಯಮಗಳು ಮಿಂಚಿನ ವೇಗದಲ್ಲಿ ಸುದ್ದಿ ತಲುಪಿಸುವಲ್ಲಿ ನಿರತವಾಗಿದೆ. ಸಿನೆಮಾ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದ್ಧತೆ,ಕಾರ್ಯವ್ಯಾಪ್ತಿ ಬಗ್ಗೆ ಅರಿವು ಮೂಡಿಸಿ ಅಗತ್ಯ ಸಹಕಾರ ನೀಡುವ ನಿಟ್ಟಿನಲ್ಲಿ ಕಾರ್ಯಗಾರ ಹಮ್ಮಿಕೊಂಡು ಪತ್ರಕರ್ತರ ವೃತ್ತಿಪರತೆ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು.
ಹಿರಿಯ ಪತ್ರಕರ್ತ ಮೈಸೂರು ಹರೀಶ್ ಹಾಗೂ ಹಿರಿಯ ಸಿನಿಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ನೇತೃತ್ವದಲ್ಲಿ ಡಿಜಿಟಲ್ ಮಾಧ್ಯಮದವರೊಂದಿಗೆ ಸಂವಾದ ನಡೆಸಿ, ಕನ್ನಡ ಫಿಲಂ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ (ಕೆಎಫ್‌ಡಿಎಂಎ) ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಮೈಸೂರು ಹರೀಶ್, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಡಿಜಿಟಲ್ ಮಾಧ್ಯಮ ಮಿಂಚಿನ ವೇಗದಲ್ಲಿ ಸುದ್ದಿ ತಲುಪಿಸುವ ಕೆಲಸ ಮಾಡುತ್ತಿದೆ ಎಂಬುದು ಖುಷಿಯ ವಿಚಾರ. ಆದರೆ, ಸುದ್ದಿ ತಲುಪಿಸುವ ಭರದಲ್ಲಿ ವೃತ್ತಿಪರತೆಯನ್ನು ಮರೆಯಬಾರದು. ಯಾವುದೇ ಮಾಧ್ಯಮವಿರಲಿ ಪತ್ರಕರ್ತನಾದವನಿಗೆ ತನ್ನ ವೃತ್ತಿಪರತೆ ಬಗ್ಗೆ ಬದ್ಧತೆ ಇರಬೇಕು ಎಂದು ತಿಳಿಸಿದರು.
ಡಿಜಿಟಲ್ ಕ್ಷೇತ್ರದಲ್ಲಿ ದಿನೇ ದಿನೇ ಹೊಸ ಆವಿಷ್ಕಾರಗಳು ಬರುತ್ತವೆ ಅದಕ್ಕೆ ಹೊಂದಿಕೊಳ್ಳುವುದರ ಜೊತೆಗೆ ವೃತ್ತಿಪರತೆ ಬೆಳಸಿಕೊಳ್ಳಬೇಕು. ಕೆಲವೊಂದು ಯೂಟ್ಯೂಬರ್‌ಗಳು ತಮ್ಮ ಚಾನಲ್‌ನ ವೀಕ್ಷಣೆ ಹೆಚ್ಚಿಸಿಕೊಳ್ಳುವ ಭರದಲ್ಲಿ ಥಂಬ್‌ನೈಲ್ ನಲ್ಲಿ ವಿಚಿತ್ರ ಶೀರ್ಷಿಕೆ ನೀಡಿ ಪ್ರಸಾರ ಯೋಗ್ಯವಲ್ಲದ ತುಣುಕುಗಳನ್ನು ಹರಿಬಿಡುತ್ತಾರೆ. ಮತ್ತೊಬ್ಬರ ಖಾಸಗಿ ಜೀವನಗಳ ಅಂತೆ,ಕಂತೆ ತೋರಿಸುವ ಮೂಲಕ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು.ಸುದ್ದಿ ಮಾಡುವ ಮೊದಲು ಸುದ್ದಿಯ ನಿಖರತೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ನಂತರ ಮಾತನಾಡಿದ ಹಿರಿಯ ಸಿನಿಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊಳ್ಳುತ್ತಾ ಛಾಯಾಗ್ರಾಹಕರಿಗೆ ವೃತ್ತಿಪರತೆ ಹಾಗೂ ಶಿಸ್ತಿನ ಬಗ್ಗೆ ಕಿವಿಮಾತು ಹೇಳಿದರು. ನಮ್ಮ ಕಾಲದಲ್ಲಿ ಡಿಜಿಟಲ್ ಮಾಧ್ಯಮಗಳು ಇರಲಿಲ್ಲ. ಕೆಲವೇ ಕೆಲವು ಸಿನಿಮಾ ಛಾಯಾಗ್ರಾಹಕರಿದ್ದವು. ಒಂದು ಛಾಯಾಚಿತ್ರ ತೆಗೆದು ಪ್ರಿಂಟ್ ಹಾಕಿಸುವುದರ ಹಿಂದೆ ಶ್ರಮವಿತ್ತು. ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳ ಮೂಲಕ ಜಗತ್ತನ್ನು ನೋಡಬಹುದಾಗಿದೆ.ಯುವ ಪತ್ರಕರ್ತರು ತಮ್ಮ ಕೆಲಸಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳಬೇಕಿದೆ. ಯಾರಗಮನವನ್ನೋ ಸೆಳೆಯಲು ವೃತ್ತಿಪರತೆ ಬಿಟ್ಟು ಕಾರ್ಯ ನಿರ್ವಹಿಸಬಾರದು ಎಂದರು.
ವೇದಿಕೆಯಲ್ಲಿ ಸಿನಿಛಾಯಾಗ್ರಾಹಕ ಮನು, ಸಿನಿಲೋಕ ಸಂಪಾದಕ ಸುನೀಲ್, ಮೈಮೂವಿ ಬಜಾರ್ ಸಂಪಾದಕ ನವರಸನ್ ಇದ್ದರು.
” ಮೈಸೂರು ಹರೀಶ್ ಈ ಹಿಂದೆ ಹಲವು ಪತ್ರಿಕೆಗಳಲ್ಲಿ ವರದಿಗಾರ,ಹಿರಿಯ ವರದಿಗಾರರಗಿ ಸೇವೆ ಸಲ್ಲಿಸಿ, ಅರಗಿಣಿ ಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ,
ಸ್ಟಾರ್ ಆಫ್ ಸಿನೆಮಾ ಡಿಜಿಟಲ್ ಪ್ರಧಾನ ಸಂಪಾದಕರಾಗಿದ್ದಾರೆ. ಇನ್ನು ಹಿರಿಯ ಛಾಯಾಗ್ರಾಹಕ ಕೆ.ಎನ್.ನಾಗೇಶ್‌ಕುಮಾರ್ ಅವರಿಗೆ 62ರ ಹರಯ 4ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಚಿತ್ರಜ್ಯೋತಿ, ಮಂಗಳ, ಲಂಕೇಶ್ ಪತ್ರಿಕೆ, ಮಿನುಗುತಾರೆ, ಮಾರ್ಧನಿ,ರಾಜುಪತ್ರಿಕೆ,ಪ್ರಜಾವಾಣಿ,ಕನ್ನಡಪ್ರಭ, ತುಷಾರ,ರೂಪತಾರ,ಕರ್ಮವೀರ,ಮಲ್ಲಿಗೆ, ಗೃಹಶೋಭ, ಈ ಸಂಜೆ, ಅರಗಿಣಿ,ಉದಯವಾಣಿ,ವಿಜಯಕರ್ನಾಟಕ,ಟೈಮ್ಸ್ ಆಫ್ ಇಂಡಿಯಾ,ದ ವೀಕ್, ಡೆಕ್ಕನ್ ಕ್ರೊನಿಕಲ್ ಸೇರಿದಂತೆ ಇನ್ನೂ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ,ಇದೀಗ ಇವರ ಒಡೆತನದಲ್ಲಿ ಸಿನಿಸರ್ಕಲ್ ಡಿಜಿಟಲ್ ಮೂಲಕ ಚಿತ್ರರಂಗದ ಸುದ್ದಿಗಳನ್ನು ಭಿತ್ತರಿಸುತ್ತಿದ್ದಾರೆ.